Sunday, May 31, 2009

ರುಚಿರುಚಿಯಾದ ಗರಿಗರಿಯಾದ ಮೈದಾ ಬಿಸ್ಕತ್ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಬಿಸ್ಕತ್‌ ಇದು. ನೀವೂ ರುಚಿ ನೋಡಿ! ಬೇಕರಿಯಲ್ಲಿ, ಅಲ್ಲಿ ಇಲ್ಲಿ ಕೊಳ್ಳೋದಕ್ಕಿಂತ ಮನೆಲೇ ಬೇಕಾದಷ್ಟು ಮಾಡಬಹುದು. ಹಿರಿಯರು, ಕಿರಿಯರು ಎನ್ನದೆ ಎಲ್ಲರೂ, ಯಾವುದೇ ಸಮಯದಲ್ಲಿ ತಿನ್ನಬಹುದಾದ ರುಚಿಕರ ತಿನಿಸು.

ಅಗತ್ಯವಾದ ಪದಾರ್ಥಗಳು :

ಮೈದಾ : 1 ಬಟ್ಟಲು
ರವೆ : 1/2 ಬಟ್ಟಲು
ಕೆನೆಭರಿತ ಹಾಲು/ಮೊಸರು : 1/2 ಲೋಟ
ತುಪ್ಪ/ಬೆಣ್ಣೆ : 4 ಚಮಚ
ಸಕ್ಕರೆ : 5 ಚಮಚ
ವೆನಿಲ್ಲಾ ಎಸೆನ್ಸ್‌ : ಒಂದೂವರೆ ಚಮಚ
ಬಾದಾಮಿ ಪುಡಿ(ಅರೆದು ಪುಡಿ ಮಾಡಿರುವ ಬಾದಾಮಿ) : 2 ಚಮಚ
ಅನಾನಸ್‌ ಜಾಮ್‌
ಮೊಟ್ಟೆ : 1
(ಮೊಟ್ಟೆ ಬದಲಿಗೆ ಎರಡು ಚಮಚ ಜಾಸ್ತಿ ಬೆಣ್ಣೆ ಹಾಕಬಹುದು)

ಮಾಡುವ ವಿಧಾನ :

* ಮೊದಲು ಮೈದಾ ಹಿಟ್ಟಿಗೆ ಬೆಣ್ಣೆ, ಬಾದಾಮಿ ಪುಡಿ, ಸಕ್ಕರೆ, ಎಸೆನ್ಸ್‌, ರವೆಯನ್ನು ಹಾಕಿ. ಹಾಲು/ಮೊಸರಿನಲ್ಲಿ ಗಟ್ಟಿಯಾಗಿ ಮಿಶ್ರಣವನ್ನು ಕಲಸಿ. ಮಿಶ್ರಣ ನೀರಿನಂತಿರಬಾರದು.

* ಕೇಕ್‌ ಬಾಣಲೆಯ ತಳಕ್ಕೆ ಎಣ್ಣೆ/ತುಪ್ಪ ಹಚ್ಚಿರಿ. ಮೊದಲೇ ಕಲಸಿ ಸಿದ್ಧಪಡಿಸಿರುವ ಹಿಟ್ಟನ್ನು ಕೇಕ್‌ ಬಾಣಲೆಗೆ ಹಾಕಿ, 350 ಡಿಗ್ರಿ ಶಾಖದಲ್ಲಿ ಬೇಯಿಸಿ.

* ಅನಾನಸ್‌ ಅಥವಾ ಬೇರೆ ಯಾವುದೇ ಜಾಮ್‌ ತೆಗೆದುಕೊಂಡು, ಬಾಣಲೆಯಲ್ಲಿನ ಬಿಸ್ಕತ್‌ಗಳ ಮೇಲೆ ಸವರಬೇಕು. ಬೇಕಾದ ರೀತಿಯಲ್ಲಿ ಕತ್ತರಿಸಿಕೊಂಡು ನಂತರ ಹದಿನೈದು ನಿಮಿಷ ಓವನ್‌ನಲ್ಲಿ ಬೇಯಿಸಿ. ಅದು ತಣ್ಣಗಾದ ಹತ್ತು ನಿಮಿಷದ ನಂತರ ಹೊರತೆಗೆಯಿರಿ. ಆಗ ರುಚಿರುಚಿಯಾದ ಬಿಸ್ಕತ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ.

ನಮ್ಮ ಕಿವಿಮಾತು : ಮಕ್ಕಳಿಗೆ ದಿನಕ್ಕೊಂದು ಬಾದಾಮಿಯನ್ನು ತಿನ್ನಲು ಕೊಟ್ಟರೆ, ಅವರ ಬುದ್ಧಿಶಕ್ತಿ ಚಿಗುರುತ್ತದೆ.

ಗೋಪಿಕಾರವೀಂದ್ರ.

Friday, May 1, 2009

ಸತ್ಯನಾರಾಯಣನ ಪೂಜೆ, ಮಮ ಪ್ರಸಾದ ವಿನಿಯೋಗಃಪೂಜೆಯೆಂದರೆ ಸತ್ಯನಾರಾಯಣ ಪೂಜೆಯಯ್ಯಾ, ರುಚಿಯೆಂದರೆ ಸಪಾದ ಭಕ್ಷ್ಯದ್ದಯ್ಯಾ...

ಸತ್ಯ ನಾರಾಯಣ ಪೂಜೆಯಲ್ಲಿ ಮಹಾ ಪೂಜೆಯಾದ ನಂತರ ಕಡ್ಡಾಯವಾಗಿ ತಿನ್ನಬೇಕು ಅಂತ ಪ್ರಸಾದ ರೂಪದಲ್ಲಿ ಒಂದಿಷ್ಟು ಸ್ವೀಟ್‌ ಕೊಡುತ್ತಾರಲ್ಲ. ಎಂಥ ರುಚಿ ಅಂತೀರಿ. ಬಣ್ಣವಿಲ್ಲದ ಕೇಸರೀಬಾತ್‌ನ ಹಾಗೆ ಕಾಣುವ ಈ ಸ್ವೀಟ್‌ ಯಾಕಿಷ್ಟು ರುಚಿ ಅಂತ ಕೇಳಿದರೆ, ‘ಅದು ದೇವರಿಗೆ ನೈವೇದ್ಯ ಮಾಡಿದ್ದು . ಅದಕ್ಕೇ ಅಷ್ಟೊಂದು ರುಚಿ...’ ಅಂತ ಅಮ್ಮ ಸಮಜಾಯಿಷಿ ಹೇಳುತ್ತಾಳೆ. ಒಂಚೂರೇ ಕೊಡುತ್ತಾರಲ್ಲ ಅದಕ್ಕೇ ಅಷ್ಟು ರುಚಿ ಕಣೋ... ಅಂತ ಸ್ನೇಹಿತ ಲಾಜಿಕಲ್‌ ಉತ್ತರ ಹೇಳಿದರೂ. .

ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಮಾಡುವ ಸಿಹಿ ತಿಂಡಿಯ ಹೆಸರು ಸಪಾದ ಭಕ್ಷ್ಯ. ಮನೆಯಲ್ಲಿ ಸಣ್ಣ ಸಮಾರಂಭವೆಂದರೂ ಸತ್ಯನಾರಾಯಣ ಪೂಜೆ ಇಟ್ಟುಕೊಳ್ಳುವುದು ರೂಢಿ. ಸೋ, ಈ ಸಪಾದ ತಯಾರಿಸುವುದು ಹೇಗೆಂದು ತಿಳಿಯೋಣ.

ಬೇಕಾದ ಸಾಮಾನು :

ಎರಡು ಲೋಟ ಸಕ್ಕರೆ
ಎರಡು ಲೋಟ ಮೈದಾಹಿಟ್ಟು, ಅಥವಾ ಸೋಜಿ.
ಎರಡು ಲೋಟ ನೊರೆಹಾಲು
ಮೂರು ನಾಲ್ಕು ಬಾಳೆ ಹಣ್ಣುಗಳು
ಎರಡು ಲೋಟ ತುಪ್ಪ
ಬಾಳೆಹಣ್ಣಿನ ಹೊರತಾಗಿ ಎಲ್ಲ ವಸ್ತುಗಳೂ ಸಮಪ್ರಮಾಣದಲ್ಲಿರಬೇಕು.
ಸಾಮಾನ್ಯವಾಗಿ ಸತ್ಯನಾರಾಯಣ ಪೂಜೆಗೆ ನೈವೇದ್ಯ ರೂಪದಲ್ಲಿ ಸಪಾದ ಭಕ್ಷ್ಯ ತಯಾರಿಸುವುದಿದ್ದರೆ, ಪ್ರತಿಯಾಂದು ವಸ್ತುವಿನ ಪ್ರಮಾಣ ಒಂದೂಕಾಲು ಸೇರಾಗಿರಬೇಕು ಎಂಬುದು ಪ್ರತೀತಿ. ಮತ್ತೆ ಪುರೋಹಿತರು ಹೇಳಿದ ಅಳತೆಯೇ ಅಂತಿಮ.

ವಿಧಾನ:

ಬಾಳೆ ಹಣ್ಣನ್ನು ಸುಲಿದು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಕಂಚಿನ ಬಾಣಲೆಯಲ್ಲಿ ತುಪ್ಪವನ್ನು ಸುರಿದು ಒಲೆಯ ಮೇಲಿಟ್ಟು, ಸ್ವಲ್ಪ ಹೊತ್ತು ಕಾಯಿಸಿ. ತುಪ್ಪ ಬಿಸಿಯಾದ ನಂತರ ಹೆಚ್ಚಿಟ್ಟ ಬಾಳೆ ಹಣ್ಣನ್ನು ತುಪ್ಪಕ್ಕೆ ಹಾಕಿ. ಅದು ತುಸುವೇ ಕಂದು ಬಣ್ಣಕ್ಕೆ ತಿರುಗುವ ತನಕ ಮಗುಚುತ್ತಿರಿ. ನಂತರ ಮೈದಾ ಹಿಟ್ಟು ಹಾಕಿ ಅದು ಕೆಂಪಗಾಗುವ ವರೆಗೆ ಸ್ವಲ್ಪ ಹೊತ್ತು ಮಗುಚಿ. ನೀವು ಮೈದಾ ಹಿಟ್ಟಿನ ಬದಲಿಗೆ ಸೋಜಿ( ಸಪೂರ ಸಜ್ಜಿಗೆ) ಬಳಸುತ್ತೀರಾದರೆ, ಸೋಜಿ ಬೆಂದ ಪರಿಮಳ ಬರುವವರೆಗೆ ಮಗುಚಬೇಕು. ನಂತರ ಸಕ್ಕರೆ ಹಾಕಿ ಅದು ಪೂರ್ತಿ ಕರಗುವ ತನಕ ಮಗುಚುತ್ತಿರಬೇಕು.

ನಂತರ ಉರಿ ಸಣ್ಣಗೆ ಮಾಡಿ, ಹಾಲು ಹಾಕಿ ಮತ್ತೆ ಮಗುಚಿ. ಅಗತ್ಯವಿದ್ದರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಗಳನ್ನು ಬೆರೆಸಬಹುದು. ತಕ್ಷಣವೇ ಇಳಿಸಿ. ಒಲೆಯಿಂದ ಇಳಿಸುವಾಗ ಮಿಶ್ರಣ ಸ್ವಲ್ಪ ನೀರಾಗಿದ್ದರೂ, ತಣಿಯುತ್ತಿದ್ದ ಹಾಗೇ ದಪ್ಪಗಾಗುತ್ತದೆ. ಬಾಣಲೆ ಮೇಲೆ ಸ್ಟೌವ್‌ ಮೇಲಿಟ್ಟು, ಕೆಳಗಿಳಿಸುವವರೆಗೆ ಮಾತು, ಫೋನ್‌ ಯಾವುದಕ್ಕೂ ಅಡಿಗೆಮನೆಯಿಂದಾಚೆಗೆ ಹೋಗುವ ಹಾಗಿಲ್ಲ.

**ಗೋಪಿಕಾರವೀಂದ್ರ.

ಮಾವಿನಕಾಯಿಯ ಮಸಾಲೆಭಾತ್
ಮಾವಿನಕಾಯಿ ಮತ್ತು ಮಾವಿನಹಣ್ಣಿನ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಮಾಡಲು ಇದುವೇ ಸಕಾಲ. ಯಾಕೆಂದರೆ ಮಾವಿನಕಾಯಿಗಳು ಎಲ್ಲಾ ಕಾಲದಲ್ಲೂ ಲಭ್ಯವಿರುವುದಿಲ್ಲ. ಸಿಕ್ಕಾಗಲೇ ಬಗೆಬಗೆಯ ತಿನಿಸುಗಳನ್ನು ಮಾಡಿ ರುಚಿ ನೋಡಿ, ಇತರರಿಗೂ ತಿಳಿಸುವವ ಜಾಣ. ಬನ್ನಿ ಮಾವಿನಕಾಯಿ ಮಸಾಲೆಭಾತ್ ಮಾಡೋಣ.

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

* ಸಾದಾ ಅಕ್ಕಿ - ಒಂದು ಲೋಟ
* ಅರ್ಧ ಹಣ್ಣಾದ ಮಾವಿನಕಾಯಿ - 1
* ತುಪ್ಪ ಅಥವಾ ಎಣ್ಣೆ - 2 ಚಮಚ
* ಅರಸಿನಪುಡಿ - 1/4 ಚಮಚ
* ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಚಮಚ
* ಕರಿಬೇವಿನ ಸೊಪ್ಪು - 1 ಚಮಚ
* ಜೀರಿಗೆ ಮತ್ತು ಕೆಂಪುಮೆಣಸಿನಕಾಯಿ - 2 ಚಮಚ
* ತೆಂಗಿನ ಕಾಯಿ - 1 ಹಿಡಿ
* ರುಚಿಗೆ ಬೇಕಾದಷ್ಟು ಉಪ್ಪು

ತಯಾರಿಸುವ ವಿಧಾನ:

ಮೊದಲು ಅನ್ನ ಮಾಡಿಕೊಳ್ಳಿರಿ. ಅದನ್ನು ತಣ್ಣಗಾಗಲು, ಅಗಲವಾದ ತಟ್ಟೆಯಲ್ಲಿ ಹರಡಿ ಸ್ವಲ್ಪ ಕಾಲಬಿಡಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಮಾವಿನಕಾಯಿಯ ಹಸಿರು ಸಿಪ್ಪೆಯನ್ನು ಎರೆದು ಅದನ್ನು ತುರಿದಿಟ್ಟುಕೊಳ್ಳಿ. ಮಸಾಲೆ ಸಾಮಗ್ರಿಯನ್ನು ರುಬ್ಬುವಾಗ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ತುರಿದಿಟ್ಟ ಮಾವಿನಕಾಯಿಯನ್ನು ಸೇರಿಸಿ ಆನಂತರ ಎಣ್ಣೆಯನ್ನು ಪಾತ್ರೆಯೊಂದರಲ್ಲಿ ಬಿಸಿ ಮಾಡಿಕೊಂಡು ಒಗ್ಗರಣೆ ಮಾಡಿರಿ. ಕೊನೆಯಲ್ಲಿ ರುಬ್ಬಿಕೊಂಡ ಮಸಾಲೆ ಸೇರಿಸಿ ಎರಡು ನಿಮಿಷ ಕಾಲ ಹುರಿಯಿರಿ. ಇದನ್ನು ಅನ್ನಕ್ಕೆ ಉಪ್ಪಿನೊಂದಿಗೆ ಬೆರೆಸಿರಿ. ತಯಾರಾದ ಭಾತಿಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿರಿ, ಮಾವಿನಕಾಯಿ ಮಸಾಲೆಭಾತ್ ರೆಡಿ. ತಿಂದು ಮಜಾ ಉಡಾಯಿಸಿ.

ಯಾವುದೇ ತಿನಿಸಿರಲಿ ತಿನ್ನಲೇಬೇಕು ಅನ್ನಿಸಿದಾಗ, ತಿನ್ನದೇ ಮತ್ತೆ ತಿಂದರಾಯಿತು ಎಂದು ಮುಂದೆ ಹಾಕಿದರೆ ಹೊಟ್ಟೆಗೆ ಅನ್ಯಾಯ ಮಾಡಿಕೊಂಡಂತೆ ಅಂತೆ. ಈ ರೆಸಿಪಿ ಓದಿದ ಮೇಲಂತೂ ನಿಮಗೆ ಬಾಯಲ್ಲಿ ನೀರೂರದೆ ಇರದು, ನಾವೂ ಮಾಡಿಕೊಂಡು ತಿಂದಿಂದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅನ್ನಿಸುವುದೂ ಸಹಜ. ದಯವಿಟ್ಟು ನಿಮ್ಮ ಹೊಟ್ಟೆಗೆ ಅನ್ಯಾಯ ಮಾಡಿಕೊಳ್ಳಬೇಡಿ. ಈಗಲೇ ಮಾವಿನಕಾಯಿ ಮಸಾಲಾಭಾತ್ ತಯಾರಿಸಿ ರುಚಿನೋಡಿ, ನಮಗೂ ತಿಳಿಸಿರಿ.

****ಗೋಪಿಕಾರವೀಂದ್ರ