Friday, July 31, 2009

ಖಾರ ಖಾರ ಧಾರವಾಡ ಮಿರ್ಚಿ ಬಜಿ




ಏನೇನು ಬೇಕು : ಕಡಲೆ ಹಿಟ್ಟು (ಒಂದು ಬಟ್ಟಲು), ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ (ಇವೆಲ್ಲ ಸ್ವಲ್ಪ), ಅಡುಗೆ ಸೋಡಾ, ಜೀರಿಗೆ, ಅರಿಷಿಣ (ಚಿಟಿಕೆಯಷ್ಟು), ರುಚಿಗೆ ಉಪ್ಪು ಮತ್ತು ಕರಿಯಲು ಎಣ್ಣೆ. ಮಿರ್ಚಿ ಅಂದ್ರೆ ಹಚ್ಚ ಹಸಿರು ಮೆಣಸಿನ ಕಾಯಿ (ಬೆಂಗಳೂರು ಕಡೆ ಸಿಗುವ ತಿಳಿಹಸಿರು ಮೆಣಸಿನ ಕಾಯಿ ಅಲ್ಲ) ಮರೆತೀರಿ ಜೋಕೆ.

ಮಾಡುವ ರೀತಿ : ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ ಮುಂತಾದವುಗಳನ್ನು ನೀರಿನೊಂದಿಗೆ ಕಲಿಸಿಟ್ಟುಕೊಳ್ಳಿ. ಅದಕ್ಕೆ ಅಡುಗೆ ಸೋಡಾ, ಉಪ್ಪು, ಜೀರಿಗೆ, ಬಣ್ಣಕ್ಕೆ ಅರಿಷಿಣ ಸೇರಿಸಿ ಕಲಿಸಿಟ್ಟುಕೊಳ್ಳಿ. ಈ ಮಿಶ್ರಣ ಬೋಂಡಾ ಮಾಡುವಾಗ ತಯಾರಿಸುವ ಹಿಟ್ಟಿನಷ್ಟು ಗಟ್ಟಿಯಾಗಿರಲಿ.

ಒಲೆ ಹತ್ತಿಸಿ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಬಿಡಿ. ತುಸು ಕುದಿ ಬರುತ್ತಿದ್ದಂತೆ ಹಸಿ ಮೆಣಸಿನ ಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ತೇಲಿಬಿಡಿ. ಒಟ್ಟಿಗೆ ಮೂರ್ನಾಲ್ಕು ಹಾಕಿದರೂ ಆಯಿತು. ಮಿರ್ಚಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಝಾಲರಿಯಿಂದ ಹೊರತೆಗೆದು ನ್ಯೂಸ್ ಪೇಪರ್ ಮೇಲೆ ಹಾಕಿ ಎಣ್ಣೆ ಹೀರಿಕೊಳ್ಳಲು ಬಿಡಿ.

ಬಿಸಿ ಬಿಸಿ ಧಾರವಾಡ ಮಿರ್ಚಿ ತಿನ್ನುವಾಗ ಕಣ್ಣಲ್ಲಿ, ಮೂಗಲ್ಲಿ ನೀರು ಸೋರುತ್ತಿದ್ದರೂ ಫಿಲ್ಟರ್ ಕಾಫಿಯೊಡನೆ ಹೀರಿಕೊಳ್ಳಲು ಸಖತ್ತಾಗಿರುತ್ತದೆ. ಕಾಫಿ ಮಾಡುವುದರಲ್ಲಿ ಕೂಡ ನೈಪುಣ್ಯತೆ ಬೇಕು ಅಂದ್ರೆ ನೀವು ನಂಬಲೇಬೇಕು. ಕಾಫಿ ಮಾಡುವುದರಲ್ಲೂ ಅನೇಕ ವಿಧಾನಗಳಿವೆ. ಇಲ್ಲಿದೆ ನೋಡಿ (ಓದಿ) ಕಾಫಿ ಮೇಕಿಂಗ್ ಟಿಪ್ಸ್.

ವಿಪರೀತ ಖಾರ ನೆತ್ತಿಗೇರಿದರೆ ಚಂಪಾಕಲಿ ತಿನ್ನಿ, ಸಂತೋಷವಾಗಿರಿ.

Wednesday, July 1, 2009

ಭಲೇ ಭಲೇ ರವೆ ಕೋಡುಬಳೆ!




ಅಕ್ಕಿಹಿಟ್ಟಿನಿಂದ ಮಾಡಿದ ಕೋಡುಬಳೆ ನಿಮಗೆ ಗೊತ್ತಿರಬಹುದು, ನೀವೂ ಮಾಡಿ ತಿಂದಿರಬಹುದು. ಅಕ್ಕಿಹಿಟ್ಟಿನ ಬದಲು ರವೆಯನ್ನುಪಯೋಗಿಸಿ ಕೋಡುಬಳೆ ಮಾಡುವ ವಿಧಾನ ಇಲ್ಲಿದೆ, ನೀವೂ ಒಮ್ಮೆ ಮಾಡಿನೋಡಿ.

ಬೇಕಾಗುವ ಸಾಮಗ್ರಿಗಳು :

2 ಲೋಟ ಸಣ್ಣರವೆ (ಚಿರೋಟಿ ರವೆ)
1/2 ಹೋಳು ಹಸಿಕಾಯಿತುರಿ
ಜೀರಿಗೆ 2 ಚಮಚ
5-6 ಎಸಳು ಬೆಳ್ಳುಳ್ಳಿ (ಇದು ಐಚ್ಛಿಕ; ಹಾಕದಿದ್ರೂ ಪರವಾಗಿಲ್ಲ)
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ ಅಥವ ಕಾರದಪುಡಿ, ಉಪ್ಪು (ರುಚಿಗೆ ತಕ್ಕಷ್ಟು)
ಬೆಣ್ಣೆ 1/4 ಕಪ್‌(ನಿಮ್ಮ ಡಯಟ್‌ಗೆ ಅನುಗುಣವಾಗಿ)
ಚಿಟಿಕೆ ಇಂಗು
ಕರಿಯಲು ಎಣ್ಣೆ

ಮಾಡುವ ವಿಧಾನ :

ಮಾಡಬೇಕಾಗಿರುವುದು ಇಷ್ಟೇ : ಮೊದಲು ರವೆಯನ್ನು ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ.

ಕಾಯಿತುರಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಇಂಗು ಎಲ್ಲವನ್ನೂ ನುಣ್ಣಗೆ ರುಬ್ಬಿ. (ನೀರು ಜಾಸ್ತಿ ಹಾಕಬೇಡಿ). ರುಬ್ಬಿದ ಮಿಶ್ರಣವನ್ನು ರವೆಗೆ ಹಾಕಿ. ಬೆಣ್ಣೆಯನ್ನು ಬಿಸಿಮಾಡಿ ಎಲ್ಲವನ್ನೂ ಸೇರಿಸಿ ಗಟ್ಟಿಯಾಗಿ ಕಲಸಿ. ಹಿಟ್ಟು 1 ಗಂಟೆ ನೆನೆದ ನಂತರ, ಕೋಡುಬಳೆ ಆಕಾರ ಮಾಡಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

ಗರಿಗರಿಯಾಗಿ ರುಚಿರುಚಿಯಾಗಿ ನೀವು ಮಾಡಿದ ಈ ಕೋಡುಬಳೆಗಳನ್ನು ಚಹ ಕುಡಿಯುವಾಗ ಮೆಲ್ಲಲು ನಿಮ್ಮ ಯಜಮಾನ್ರೂ ಇಷ್ಟ ಪಡ್ತಾರೆ ನೋಡಿ. ಹಾಗೂ ನಿಮ್ಮ ಅಡುಗೆ ಕೌಶಲ್ಯದ ಬಗ್ಗೆ, ಕಡೇಪಕ್ಷ ಕೋಡುಬಳೆ ಎಕ್ಸ್‌ಪರ್ಟೈಸ್‌ ಬಗ್ಗೆ ಕೋಡು ಮೊಡಿಸಿಕೊಳ್ಳಿ

ಅವಲಕ್ಕಿ ಪೊಂಗಲ್ ಮತ್ತು ಹುಣಿಸೆ ಗೊಜ್ಜು



ಶ್ರಾವಣ ಮಾಸದಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ತಯಾರಿಸಿದ ಗೊಜ್ಜವಲಕ್ಕಿ, ಶೇಂಗಾ ಪುಟಾಣಿ ಉಂಡೆ, ಅರಳಿನ ಉಂಡೆ, ಬೇಸನ್ ಲಾಡು, ಚಕ್ಕುಲಿ ಮುಂತಾದ ಎಲ್ಲ ತಿಂಡಿಗಳಲ್ಲಿ ಹೆಚ್ಚಾಗಿ ಆಕರ್ಷಿಸಿದ್ದು ಅಮ್ಮ ವಿಶೇಷವಾಗಿ ತಯಾರಿಸಿದ ಅವಲಕ್ಕಿ ಪೊಂಗಲ್ ಅಥವಾ ಅವಲಕ್ಕಿ ಹುಗ್ಗಿ.

ನಾನೇ ಮನೆಯಲ್ಲಿ ಮಾಡಿದ್ದ ಗೊಜ್ಜವಲಕ್ಕಿ ಮತ್ತು ಅವರಿವರ ಮನೆಯಿಂದ ಬಂದ ತಿಂಡಿಗಳನ್ನು ತಿಂದು ರುಚಿಗೆಟ್ಟಿದ್ದ ನಾಲಿಗೆಗೆ ಅವಲಕ್ಕಿ ಪೊಂಗಲ್ ಅಪ್ಯಾಯಮಾನವೆನಿಸಿತು. ಜೊತೆಗಿದ್ದ ಹುಳಿಹುಳಿ ಹುಣಿಸೆ ಗೊಜ್ಜು ಹುಗ್ಗಿಯ ರುಚಿಯನ್ನು ದುಪ್ಪಟ್ಟು ಮಾಡಿತು. ಇದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡು ನಿಮಗೆ ತಿಳಿಸಿದ್ದೇನೆ. ಇದು ಹೊಸರುಚಿ ಹೌದೋ ಅಲ್ಲವೋ ಗೊತ್ತಿಲ್ಲ, ರುಚಿಯಂತೂ ಸಖತ್ತಾಗಿದೆ. ನೀವೂ ಮಾಡಿ ನೋಡಿ.

ಈ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ

ಗಟ್ಟಿ ಅವಲಕ್ಕಿ 1 ಕಪ್
ಹೆಸರುಬೇಳೆ 1/2 ಕಪ್
ಹೆರೆದ ಒಣ ಕೊಬ್ಬರಿ 3 ಟಿಸ್ಪೂನ್
ಜೀರಿಗೆ
ಮೆಣಸಿನ ಕಾಳು ಅಥವಾ ಮೆಣಸಿನ ಪುಡಿ
ಉಪ್ಪು
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು

ತಯಾರಿಸುವ ವಿಧಾನ

ಗಟ್ಟಿ ಅಥವಾ ದಪ್ಪ ಅವಲಕ್ಕಿಯನ್ನು ಐದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಕುಕ್ಕರಿನಲ್ಲಿ ಹೆಸರುಬೇಳೆಯನ್ನು ಬೇಯಿಸಿಕೊಂಡ ನಂತರ ನೆನೆಸಿಟ್ಟ ಅವಲಕ್ಕಿಯನ್ನು ಅದಕ್ಕೆ ಸೇರಿಸಿ ಮತ್ತೆ ಒಲೆಯ ಮೇಲೆ ಕುದಿಯಲು ಇಡಬೇಕು.

ಅದನ್ನು ಕುದಿಯಲು ಬಿಟ್ಟು ಸ್ಟೌವಿನ ಇನ್ನೊಂದು ಒಲೆಯ ಮೇಲೆ ಒಗ್ಗರಣೆಯನ್ನು ತಯಾರಿಸಿಟ್ಟುಕೊಳ್ಳಿ. ಬೇಳೆ ಮತ್ತು ಅವಲಕ್ಕಿ ಹೊಂದಿಕೊಂಡು ಕುದಿಯಲು ಶುರುವಾದ ನಂತರ ಅದಕ್ಕೆ ಜೀರಿಗೆ ಮತ್ತು ಮೆಣಸಿನ ಕಾಳು ಸೇರಿಸಬೇಕು. ಅದಕ್ಕೆ ಒಣಕೊಬ್ಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನೇ ಸೇರಿಸಿ ಮೇಲೆ ಒಗ್ಗರಣೆ ಸುರಿಯಿರಿ. ಅಷ್ಟೇ ಅವಲಕ್ಕಿ ಪೊಂಗಲ್ ಅಥವಾ ಅವಲಕ್ಕಿ ಹುಗ್ಗಿ ತಯಾರ್.

ಹುಣಿಸೆಗೊಜ್ಜು ಮಾಡುವ ವಿಧಾನ

ಹುಣಿಸೇ ಹಣ್ಣಿನ ರಸಕ್ಕೆ ಸ್ವಲ್ಪ ಪುಟಾಣಿ ಪುಡಿ, ಉಪ್ಪು, ಖಾರದ ಪುಡಿ, ಬೆಲ್ಲ ಮತ್ತು ಖರ್ಜೂರದ ಪುಡಿಯನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಬೇಕು. ಮೊದಲೇ ಒಗ್ಗರಣೆಯನ್ನು ತಯಾರಿಸಿಟ್ಟುಕೊಂಡು ನಂತರ ಇವೆಲ್ಲ ಸೇರಿಸಿ ಕುದಿಸಬಹುದು ಅಥವಾ ಕುದಿದ ನಂತರ ಒಗ್ಗರಣೆ ಸೇರಿಸಬಹುದು.