Monday, September 21, 2009

ಸಂಜೆಯ ಟೀ ಸಂಗಾತಿ ಈರುಳ್ಳಿ ನಿಪ್ಪಟ್ಟು



ಉಪ್ಪಿಟ್ಟು, ಇಡ್ಲಿ ವಡೆ, ದೋಸೆ ತಿಂದು ತಿಂದು ಬೇಸತ್ತಿರುವವರಿಗೆ ಇಲ್ಲಿದೆ ನೋಡಿ ಸವಿಯಾದ ತಿನಿಸು. ಟೀ, ಕಾಫಿಯೊಂದಿಗಂತೂ ಅದ್ಭುತವಾದ ಕಾಂಬಿನೇಷನ್ನು. ಯಾವುದೇ ಸಮಯದಲ್ಲಿ ಯಾರು ಬೇಕಾದರೂ ಮಾಡಬಹುದಾದ ಸರಳವಾದ ವಿಧಾನ ಇಲ್ಲಿದೆ. ನೀವೂ ಮಾಡಿ ರುಚಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರಿ.


ಬೇಕಾಗುವ ಸಾಮಗ್ರಿಗಳು

ಈರುಳ್ಳಿ : 2 (ಸಣ್ಣಗೆ ಹೆಚ್ಚಿದ್ದು)
ಕಡಲೆ ಹಿಟ್ಟು : 1/2 ಕಪ್
ಅಕ್ಕಿ ಹಿಟ್ಟು : 1/2 ಕಪ್
ಚಿರೋಟಿ ರವೆ : 1/2 ಕಪ್
ಮೈದಾ ಹಿಟ್ಟು : 2 ಟೀಸ್ಪೂನ್
ಕೊತ್ತಂಬರಿಸೊಪ್ಪು : 1/4 ಕಪ್ (ಸಣ್ಣಗೆ ಹೆಚ್ಚಿದ್ದು)
ಅಚ್ಚಖಾರದ ಪುಡಿ ಅಥವಾ ಹಸಿಮೆಣಸಿನಕಾಯಿ ಪೇಸ್ಟ್ ಕೂಡ ಬಳಸಬಹುದು
ಕರಿಬೇವು, ಜೀರಿಗೆ, ಉಪ್ಪು ರುಚಿಗೆ ಬೇಕಾಗುವಷ್ಟು

ಮಾಡುವ ವಿಧಾನ

ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಚಿರೋಟಿರವೆ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಒಂದು ಬಾಣಲೆಯಲ್ಲಿ ಸೇರಿಸಿಕೊಂಡು ಅದಕ್ಕೆ ಉಪ್ಪು, ಖಾರದಪುಡಿ, ಜೀರಿಗೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು. ನಂತರ ಕರಿಬೇವು, ಕೊತ್ತಂಬರಿ, ಈರುಳ್ಳಿ ಹಾಗು ಸ್ಪಲ್ಪ ಕಾದ ಎಣ್ಣೆಯನ್ನು ಮಿಶ್ರಣಮಾಡಿ ನೀರಿನಿಂದ ಹಿಟ್ಟನ್ನು ಸ್ಪಲ್ಪ ಗಟ್ಟಿಯಾಗಿ ಕಲಿಸಿಕೊಳ್ಳಬೇಕು.

ಹೀಗೆ ಕಲಿಸಿದ ಹಿಟ್ಟನ್ನು ತೆಗೆದುಕೊಂಡು ದುಂಡಾಕಾರಗೆ ಮಾಡಿ ಅಂಗೈಗೆ ಸ್ಪಲ್ಪ ಎಣ್ಣೆ ಹಚ್ಚಿಕೊಂಡು ತಟ್ಟಿ ಕಾದಎಣ್ಣೆಯಲ್ಲಿ ಕರೆಯಬೇಕು. ಕಂದುಬಣ್ಣ ಬರುವವರೆಗೆ ಕರೆದು ತೆಗೆದರೆ ಬಿಸಿಬಿಸಿಯಾದ ಈರುಳ್ಳಿ ನಿಪ್ಪಟ್ಟು ತಯಾರ್. ಈರುಳ್ಳಿ ನಿಪ್ಪಟ್ಟನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ.

ಅಂತಿಂಥ ಬೋಂಡ ನೀನಲ್ಲ ನಿನ್ನಂಥ ಬೋಂಡ ಇನ್ನಿಲ್ಲ



ಕಳೆದ ಒಂದು ವಾರದಿಂದ ಮೋಡಮುಸುಕಿದ ವಾತಾವರಣ. ಉಧೋ ಮಳೆಚಳಿಗಾಲ. ಒಂದು ಛತ್ರಿ, ಒಂದು ವುಲ್ಲನ್ ಸ್ವೆಟರ್ ಮತ್ತು ಕರಿದ ನಾಕಾರು ಗರಿಗರಿ ತಿಂಡಿ ಇದ್ದರೆ ಅಷ್ಟೇ ಸಾಕು. ಬನ್ನಿ, ಬೋಂಡ ಮಾಡೋಣ, ಮೈಸೂರು ಬೋಂಡ.

ಬೇಕಾಗುವ ಸಾಮಾನುಗಳು :

2 ಕಪ್ ಉದ್ದಿನಬೇಳೆ
ಚೂರು ಮಾಡಿಕೊಂಡ ತೆಂಗಿನಕಾಯಿ
1 ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು
1 ಚಿಟಿಕೆ ಸೋಡಾ
8 ಹಸಿ ಮೆಣಸಿನಕಾಯಿ
ಕರಿಬೇವು ಎಲೆಗಳು
ಅಡುಗೆಗೆ ಸನ್ ಫ್ಲವರ್ ಎಣ್ಣೆ

ತಯಾರಿಸುವ ವಿಧಾನ:

ಉದ್ದಿನಬೇಳೆಯನ್ನು ನೀರಿನಲ್ಲಿ ಎರಡೆರಡೂವರೆ ಗಂಟೆ ಕಾಲ ನೆನೆಹಾಕಿ ಆನಂತರ ನುಣ್ಣಗೆ ರುಬ್ಬಿಕೊಳ್ಳುವುದು. ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಇಂಗು, ತೆಂಗಿನ ಚೂರುಗಳು, ಸೋಡಾ, ಕರಿಬೇವಿನಎಲೆ ಮತ್ತು ಉಪ್ಪು ಸೇರಿಸಿ ಸ್ವಲ್ಪ ಬಿಸಿ ಎಣ್ಣೆ ಸುರಿದು ಚೆನ್ನಾಗಿ ಬೆರೆಸಿ ಉದ್ದಿನ ಹಿಟ್ಟಿಗೆ ಬೆರೆಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಸಣ್ಣ ಸಣ್ಣ ಗಾತ್ರದ ಉದ್ದಿನ ಹಿಟ್ಟಿನ ಉಂಡೆಗಳನ್ನು ಮಾಡಿಕೊಂಡು ನಿಧಾನವಾಗಿ ಎಣ್ಣೆಯಲ್ಲಿ ಮುಳುಗಿಸಿ ಕರಿಯಿರಿ.

ಜಾಲರಿಯಲ್ಲಿ ಎಣ್ಣೆ ಬಸಿದುಕೊಳ್ಳುತ್ತಾ ಬೋಂಡಗಳನ್ನು ಹೊರತೆಗೆಯಿರಿ. ಚಟ್ನಿ ಅಥವಾ ಸೂಪ್ ಜತೆ ಸವಿಯಿರಿ. ಯಾವುದೇ ಕರಿದ ತಿಂಡಿಯಾಗಿರಲಿ, ಬಾಣಲೆಯಿಂದ ಹೊರತೆಗೆದ ನಂತರ ತಂತಿಯ ಫಿಲ್ಟರ್ ಗೆ ಹಾಕಬೇಕು. ಹೆಚ್ಚುವರಿ ಎಣ್ಣೆ ಸೋಸಿ ಹೋಗಬೇಕು. ತೆಳುವಾದ ನ್ಯಾಪ್ ಕಿನ್ ಪೇಪರ್ ನಲ್ಲಿ ಬೋಂಡಗಳನ್ನು ಹಿಚುಕಿ ಎಣ್ಣೆ ಬಸಿದು ತಿಂದರೂ ಕ್ಷೇಮ.