Thursday, December 3, 2009

ಶೇಂಗಾ ಹೋಳಿಗೆ ಅಥವಾ ಕಡಲೆಕಾಯಿ ಹೋಳಿಗೆ



ಬೇಕಾಗುವ ಪದಾರ್ಥಗಳು

ಶೇಂಗಾ 1 ಬಟ್ಟಲು
ಬೆಲ್ಲ 1 ಬಟ್ಟಲು
ಗೋಧಿಹಿಟ್ಟು 1 ಬಟ್ಟಲು
ಏಲಕ್ಕಿ ಪುಡಿ 1 ಚಮಚ
ಎಣ್ಣೆ

ಮಾಡುವ ವಿಧಾನ

ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಬೋಗುಣಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು.

ನಂತರದ ಕೆಲಸ ಗೋಧಿಹಿಟ್ಟಿನ ಕಣಕವನ್ನು ತಯಾರಿಸುವುದು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ.

ನೆನಪಿಡಿ, ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ಹೊಟ್ಟೆಗಿಳಿಸಬೇಕು. ಒಂದು ಚಮಚ ತುಪ್ಪದೊಡನೆ ತಿಂದರೆ ರುಚಿಯಾಗಿರುತ್ತದೆ.

Wednesday, December 2, 2009

ಇವು ಅಡುಗೆಮನೆ ಪಿಸುಮಾತಲ್ಲ.. ಕಿವಿ ಮಾತುಗಳು!



ನಾವು ಪ್ರತಿನಿತ್ಯ ಬಳಸುವ ತರಹೆವಾರಿ ತರಕಾರಿಗಳಲ್ಲಿ ಬೀಟ್ ಗೆಡ್ಡೆ ಸಹ ಒಂದು. ಇತರೆ ತರಕಾರಿಗಳಿಗೆ ಹೋಲಿಸಿದರೆ ಬೀಟ್ ನ ಬಳಕೆ ಕಡಿಮೆ ಎಂಥಲೆ ಹೇಳಬೇಕು. ಕೆಂಬಣ್ಣದಿಂದ ತುಂಬಿರುವ ತರಕಾರಿಗಳ ರಾಣಿ ಬೀಟ್ ಗೆಡ್ಡೆ ಪೋಷಕಾಂಶಗಳ ಗಣಿ. ಬೆಳೆಯುವ ಮಕ್ಕಳಿಗೆ ಬೀಟ್ ಉಪಯುಕ್ತ ಆಹಾರ. ಇದನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

*ಬೀಟ್ ಗೆಡ್ಡೆಯಲ್ಲಿ ಸಹಜ ಸಕ್ಕರೆ ಅಂಶ ಅಧಿಕವಾಗಿದ್ದು, ಕೊಬ್ಬಿನ ಅಂಶ ವಿರಳವಾಗಿದೆ.
*ಸೋಡಿಯಂ, ಪೊಟ್ಯಾಷಿಯಂ, ರಂಜಕ, ಕ್ಯಾಲ್ಷಿಯಂ, ಅಯೋಡಿನ್, ಕಬ್ಬಿಣಾಂಶಗಳ ಗಣಿ.
*ಬಿ1, ಬಿ2,ಬಿ5, ಬಿ6, ಸಿ ಅನ್ನಾಂಗಗಳಿಂದ ಸಮೃದ್ಧ.
*ಜೀರ್ಣಕ್ರಿಯೆಗೆ, ರಕ್ತದ ಶುದ್ಧಿಗೆ ಬೀಟ್ ರೂಟ್ ಸಹಕರಿಸುತ್ತದೆ.
*ಇದರಲ್ಲಿನ ಯಾಂಟಿ ಆಕ್ಸಿಡೆಂಟ್ ಗಳು ಚರ್ಮ ಸಮಸ್ಯೆಗಳಿಂದ ಪಾರು ಮಾಡುತ್ತದೆ.
*ಖನಿಜ ಲವಣಗಳು ಹಾಗೂ ಇತರೆ ಸೂಕ್ಷ್ಮ ಪೋಷಕಾಂಶಗಳು ಬೀಟ್ ರೂಟ್ ನಲ್ಲಿ ಹೇರಳವಾಗಿವೆ.
*ಬೀಟ್ ರೂಟ್ ಎಲೆಗಳನ್ನು ಚೆನ್ನಾಗಿ ಕುದಿಸಿ ಅರ್ಧ ಕಪ್ಪು ನೀರು ಬಸಿದುಕೊಂಡರೆ, ಅದರಲ್ಲಿ ಶರೀರಕ್ಕೆ ಅಗತ್ಯವಾದ ಸುಮಾರು ಶೇ.92ರಷ್ಟು 'ಎ 'ವಿಟಮಿನ್ ಲಭಿಸುತ್ತದೆ.
*ಕೆಲವು ವಿಧದ ಕ್ಯಾನ್ಸರ್ ಗಳನ್ನು ತಡೆಯುವ ಶಕ್ತಿ ಬೀಟ್ ರೂಟ್ ಗಿದೆ.
* ಇದರಲ್ಲಿನ ಶಕ್ತಿಯುತವಾದ 'ಬೀಟಾ ಸಿಯಾನೈನ್' ಎಂಬ ಯಾಂಟಿ ಆಕ್ಸಿಡೆಂಟ್ ಬೀಟ್ ಗೆಡ್ಡೆಗೆ ಕೆಂಬಣ್ಣವನ್ನು ಪ್ರಸಾದಿಸಿದೆ.

ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು :

1. ಬಾಳೆ ಹಣ್ಣಿನಚಿಪ್ಪನ್ನು ಒಂದು ದಾರದಲ್ಲಿ ಕಟ್ಟಿ ಗೋಡೆಯ ಮೊಳೆ, ಹುಕ್‌ಗೆ ನೇತಾಕಿದರೆ, ಹಣ್ಣಿನ ಕೆಳಭಾಗ ಕಪ್ಪಾಗದೆ ಕೆಡದೆ ಇರುತ್ತದೆ.
2. ಮೆಣಸಿನಕಾಯಿ ಹೆಚ್ಚಿದ ಅಥವಾ ತುಂಡರಿಸಿದ ನಂತರ ಕೈಗೆ ಯಾವುದೇ ಎಣ್ಣೆ ಹಚ್ಚಿಕೊಂಡು ಪೇಪರ್‌ನಿಂದ ಒರೆಸಿ ಸಾಬೂನಿನಿಂದ ತೊಳೆದರೆ ಕೈಲಿ ಖಾರ ಉಳಿಯುವುದಿಲ್ಲ.
3. ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಸುರಿಯುತ್ತದೆಯಲ್ಲವೇ? ಕನ್ನಡಕ ಧರಿಸಿ ಹೆಚ್ಚಿ. ಕಣ್ಣಲ್ಲಿ ನೀರು ಬರುವುದಿಲ್ಲ.
4. ಟೀ ಮಾಡುವಾಗ ಕಿತ್ತಳೆ ಸಿಪ್ಪೆ, ಹಸಿ ಶುಂಠಿ, ತುಳಸಿ, ಹೀಗೆ ಒಂದೊಂದುಸಲ ಒಂದೊಂದನ್ನು ಹಾಕಿ ಟೀ ಮಾಡಿದರೆ ಬಹಳ ರುಚಿ ಕೊಡುತ್ತೆ. ಆರೋಗ್ಯಕ್ಕೂ ಒಳ್ಳೆಯದು.
5. ಅಡಿಗೆ ಮನೆಯ ಸಿಂಕ್‌ ಹತ್ತಿರ ಒಂದು ಹಳೆಯ ಟೂತ್‌ ಬ್ರಷ್‌ ಇಡಿ, ನಕಾಸೆ ಇರುವ ಪಾತ್ರೆ ತಿಕ್ಕಲು ಉಪಯೋಗವಾಗುತ್ತೆ.
6. ಮನೆ ಗುಡಿಸುವ ಪೊರಕೆ, ಬಾತ್‌ರೂಂ ತೊಳೆಯುವ ಪೊರೆಕೆಗೆ ದಾರದ ಕುಣಿಕೆ ಹಾಕಿ ಬಾಗಿಲ ಹಿಂದೆ/ಮೂಲೆಯಲ್ಲಿ ನೇತುಹಾಕಿ, ಪೊರಕೆ ಕಡ್ಡಿ ಹಾಳಾಗುವುದಿಲ್ಲ.
7. ಬಾಳೆ ಹಣ್ಣಿನ ರಸಾಯನ ಮಾಡುವಾಗ ಒಂದು ಅರ್ಧ ಚಮಚ ಒಳ್ಳೆ ತುಪ್ಪ ಹಾಕಿದರೆ ಬಾಳೆಹಣ್ಣು ಕಪ್ಪಾಗುವುದಿಲ್ಲ, ರುಚಿಯು ಹೆಚ್ಚುತ್ತದೆ.
8. ಒಂದುಪಾವು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಬ್ರೆಡ್ಡಿನ ಬಿಳಿಭಾಗದ ಪುಡಿ (ಮಿಕ್ಸಿಯಲ್ಲಿ ಮಾಡಿ) ಹಾಕಿ ಕಲೆಸಿದರೆ ಚಪಾತಿ ತುಂಬಾ ಮೃದುವಾಗಿ ಆಗುತ್ತದೆ.
9. ನಿಮ್ಮ ಮನೆಯಲ್ಲಿ ಮೂರು ನಾಲ್ಕು ಬೇಡವಾದ ಗ್ಯಾಸ್‌ ಲೈಟರ್‌ಗಳಿದ್ದರೆ ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಾ ಉಪಯೋಗಿಸಿದರೆ, ಎಲ್ಲಾ ಲೈಟರ್‌ಗಳೂ ಚೆನ್ನಾಗಿ ಕೆಲಸ ಮಾಡುತ್ತವೆ.
10. ಕಬ್ಬಿಣದ ಬಾಣಲೆ, ರೊಟ್ಟಿ ತವ ಉಪಯೋಗಿಸಿ ತೊಳೆದ ನಂತರ ಒರೆಸಿ ಸ್ವಲ್ಪ ಅಡಿಗೆ ಎಣ್ಣೆ ಹಚ್ಚಿಡಿ, ಮತ್ತೊಮ್ಮೆ ಉಪಯೋಗಿಸುವಾಗ ಮೇಲಿಂದ ತೊಳೆದು (ಉಜ್ಜದೆ) ಉಪಯೋಗಿಸಿ. ಚಿಟಿಕೆ ಉಪ್ಪು ಹಾಕಿ ತವ ಮೇಲೆ ಉಜ್ಜಿದರೆ ರೊಟ್ಟಿ ಅಥವಾ ದೋಸೆ ಸಲೀಸಾಗಿ ಎದ್ದು ಬರುತ್ತದೆ.
1) ಹಾಗಲಕಾಯಿ ಪಲ್ಯ ಕಹಿಯಾಗದಂತೆ ಮಾಡಲು ಅದನ್ನು ನೇರವಾಗಿ ಹೆಚ್ಚಿ ಒಳಗಿರುವ ಬೀಜಗಳನ್ನೆಲ್ಲ ಪೂರ್ತಿ ತೆಗೆಯಬೇಕು ಮತ್ತು ಬೇಯಿಸುವಾಗ ಕರಣೆ ಬೆಲ್ಲ ಹೆಚ್ಚು ಹಾಕಬೇಕು. ಆದರೆ, ಚಿಂತಿಸಬೇಡಿ ಕಹಿಯಿದ್ದರೂ ಹಾಗಲಕಾಯಿ ಪಲ್ಯ ಆರೋಗ್ಯಕ್ಕೆ ಬಲುಉತ್ತಮ.
2) ಫ್ರಿಡ್ಜ್ ನ ಒಳಬಾಗ ಮತ್ತು ಹೊರಬಾಗ ಜಿಡ್ಡು ಮತ್ತು ಕೊಳೆ ಹಾಗೇ ಇದ್ದರೆ ಒಂದು ಬಟ್ಟಲಿನಲ್ಲಿ ಅಡುಗೆ ಸೋಡಾ, ಸ್ವಲ್ಪ ಬೆಚ್ಚನೆಯ ನೀರು ಹಾಕಿ ಒಂದು ಬಟ್ಟೆಯನ್ನು ಅದರಲ್ಲಿ ನೆನೆಸಿ ಒರೆಸಿದರೆ ಸ್ವಚ್ಛವಾಗುತ್ತದೆ.
3) ರೊಟ್ಟಿ ಮಾಡಿದ ಹೆಂಚಿಗೆ ನಿಂಬೆರಸ ಹಚ್ಚಿ ತೊಳೆದರೆ ಸ್ವಚ್ಛವಾಗುತ್ತದೆ.
4) ನೀರು ಕುಡಿಯುವಾಗ ಎತ್ತರಿಸಿ ಕುಡಿಯಬೇಡಿ, ಲೋಟಕ್ಕೆ ಬಾಯಿಯನ್ನು ಕಚ್ಚಿ ಕುಡಿಯಿರಿ. ಇದರಿಂದ ಅನೇಕ ಕೀಟಗಳು ನೇರವಾಗಿ ಹೊಟ್ಟೆಗೆ ಹೋಗುವುದು ತಪ್ಪುತ್ತದೆ.
5) ಗೋದಿ ಹಿಟ್ಟಿನ ಡಬ್ಬದಲ್ಲಿ ಸ್ವಲ್ಪ ಉಪ್ಪನ್ನು ಬೆರಸಿ ಇಟ್ಟರೆ ಹುಳ ಬರುವುದಿಲ್ಲ.
6) ಅಕ್ಕಿ ತೊಳೆದ ಮೊದಲ ನೀರನ್ನು ಚೆಲ್ಲಿ ಆಮೇಲೆ ತೊಳೆದ ನೀರನ್ನು ಬೇಳೆ ಸಾರಿಗೆ ಹಾಕಿದರೆ ಸಾರು ರುಚಿಯಾಗುವುದು ಮತ್ತು ವಿಟಮಿನ್ ನಷ್ಟವಾಗುವುದಿಲ್ಲ.
7) ಕಾಫಿ ಫಿಲ್ಟರ್ಗೆ ನೀರು ಹಾಕುವಾಗ ನೀರು ಬಿಸಿಯಾಗಿರಬೇಕು ಆದರೆ ಕುದಿಯುತ್ತಿರಬಾರದು. ಮರಳಿದ ನೀರು ಹಾಕಿದರೆ ರುಚಿ ಕೆಟ್ಟು ಹೋಗುವುದು.
8) ಟೀ ಮಾಡುವಾಗ ನೀರು ಹಾಕಿ ಟೀ ಮಾಡುವ ಬದಲು, ಹಾಲನ್ನೇ ಇಟ್ಟು ಅದಕ್ಕೆ ಟೀ ಪುಡಿ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುವುದು. ಅದರ ಜೊತೆ ಯೇಲ್ಲಕ್ಕಿ ಪುಡಿ ಹಾಕಿದರೆ ಸೊಗಸಾದ ಟೀ ರೆಡಿ.
9) ಹಸಿರು ತರಕಾರಿ ಬೇಯಿಸುವಾಗ ನಿಂಬೆರಸ ಬೆರೆಸಿದರೆ ಹಸಿರು ಬಣ್ಣ ಹಾಗೆ ಇರುವುದು.
10) ಹಾಲನ್ನು ಪಾತ್ರೆಗೆ ಹಾಕುವ ಮುಂಚೆ ಪಾತ್ರೆಯನ್ನು ತಣ್ಣೀರಿನಿಂದ ತೊಳೆದು ಆಮೇಲೆ ಪಾತ್ರೆಗೆ ಹಾಲು ಹಾಕಿದಲ್ಲಿ ತಳ ಕಚ್ಚುವುದಿಲ್ಲ.
11) ಬೆಲ್ಲ, ಮೈದಾಹಿಟ್ಟು, ಕಡಲೆ ಹಿಟ್ಟುಗಳನ್ನೂ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಇಟ್ಟರೆ ಹುಳ ಬರುವುದಿಲ್ಲ.
12) ಫ್ರಿಡ್ಜ್ ನಲ್ಲಿ ಇಡುವ ಎಲ್ಲ ಪದಾರ್ಥಗಳನ್ನೂ ಬೇರೆ ಬೇರೆಯಾಗಿ ಬಿಗಿಯಾದ ಡಬ್ಬಗಳಲ್ಲಾಗಲಿ ಅಥವಾ ಪ್ಲಾಸ್ಟಿಕ್ ಕವರ್ ಗಲ್ಲಾಗಲಿ ಇಡಬೇಕು. ಇಲ್ಲದಿದ್ದರೆ ಒಂದರ ವಾಸನೆ ಒಂದಕ್ಕೆ ಹೀರಿಕೊಳ್ಳುವುದು.
13) ಬೆಣ್ಣೆ ಕಾಯಿಸಿ, ತುಪ್ಪ ಆಗಿದೆ ಎಂದು ತಿಳಿದಾಗ ಅದಕ್ಕೆ 1/2 ಚಮಚ ಉಪ್ಪನ್ನು, ಒಂದೆರಡು ಏಲ್ಲಕ್ಕಿಪುಡಿಯನ್ನು,1/2 ಚಮಚ ಹುರಿದ ಮೆಂತ್ಯ ಪುಡಿಯನ್ನು, ಚಿಟಿಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪ ತಿಳಿಯಾದ ಮೇಲೆ ಡಬ್ಬಿಗೆ ಸೋಸಿ ಇಡಿ. ಘಮ ಘಮಿಸುವ, ಮರಳು ಮರಳಾದ ತುಪ್ಪವಾಗುತ್ತದೆ.
14) ಬ್ಯಾಡಗಿ ಮೆಣಸಿನಕಾಯಿಯನ್ನು ಓವೆನ್ ನಲ್ಲಿ ಇಟ್ಟು ಒಂದು ನಿಮಿಷಕ್ಕೆ ಸೆಟ್ ಮಾಡಿ ಇಟ್ಟರೆ ಗರಿ ಗರಿ ಮನಸಿನಕಾಯಿ ಅಡುಗೆಗೆ ರೆಡಿ. ಹುರಿಯುವಾಗ ಬರುವ ಘಾಟು ಇರುವುದಿಲ್ಲ.
15) ಹಪ್ಪಳವನ್ನು ಓವೆನ್ ನಲ್ಲಿ ಇಟ್ಟು ಒಂದು ನಿಮಿಷಕ್ಕೆ ಸೆಟ್ ಮಾಡಿ ಇಟ್ಟರೆ ಎಣ್ಣೆ ಇಲ್ಲದೆ ಗರಿ ಗರಿ ಹಪ್ಪಳ ಸಿದ್ದ.
1) ಅಕ್ಕಿ ಡಬ್ಬದ ಒಳಗೆ ಹರಳೆಣ್ಣೆಯನ್ನು ಸವರಿ ಅಕ್ಕಿ ಹಾಕಿಟ್ಟರೆ ಹುಳ ಬರುವುದಿಲ್ಲ.
2) ಅಕ್ಕಿ ಡಬ್ಬದಲ್ಲಿ ಈರುಳ್ಳಿ ಅಥವಾ ಬೇವಿನ ಎಲೆ ಅಥವಾ ಅರಿಶಿಣ ಕೊಂಬುಗಳನ್ನು ಇಟ್ಟರೂ ಹುಳ ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಸಿ ಕೈಯಿಂದ ಅಕ್ಕಿ ಮುಟ್ಟಬಾರದು.
3) ಸೊಪ್ಪನ್ನು ಬೇಯಿಸುವಾಗ ಮುಚ್ಚಳ ಮುಚ್ಚಬೇಡಿ. ಮುಚ್ಚಿದಾಗ ಅದರ ಬಣ್ಣ ಬದಲಾಗುತ್ತದೆ.
4) ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ತರಕಾರಿ ಗಳನ್ನು ಹೆಚ್ಚಿದಾಗ ಕೈ ಕಪ್ಪಾಗುವುದಿಲ್ಲ.
5) ತರಕಾರಿ ಹೆಚ್ಚಿ ಕೈ ಕಪ್ಪಾಗಿದ್ದರೆ ನಿಂಬೆ ಹಣ್ಣಿನ ಸಿಪ್ಪೆಯಿಂದ ಕೈಯನ್ನು ಉಜ್ಜಿ ಕೈ ಸ್ವಚ್ಚವಾಗಿ ಮೃದುವಾಗುವುದು.
6) ಬೆಂಡೆಕಾಯಿ ಪಲ್ಯ ಲೋಳೆಯಾಗದಿರಲು ಸ್ವಲ್ಪಎಣ್ಣೆ ಹಾಕಿ ಹುರಿದ ಬಳಿಕ ಹುಣಸೆ ರಸವನ್ನು ಹಾಕಿದಲ್ಲಿ ಪಲ್ಯ ಅಥವಾ ಸಾರು ಲೋಳೆಯಾಗುವುದಿಲ್ಲ.
7) ಪಲ್ಯಕ್ಕೆ ಆಲುಗಡ್ಡೆ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿದರೆ ಸಿಪ್ಪೆ ಸಲೀಸಾಗಿ ಸುಲಿದು ಬರುತ್ತದೆ.
8) ತರಕಾರಿ ಬಾಡಿದ ಹಾಗಿದ್ದರೆ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ತರಕಾರಿಗಳನ್ನು 1/2 ಗಂಟೆ ಮುಳುಗಿಸಿಡಿ. ಮತ್ತೆ ಹೊಸದರಂತೆ ಹಾಗುತ್ತದೆ.
9) ಸಲಾಡ್ ಗಳನ್ನು ಮಾಡುವಾಗ ಈರುಳ್ಳಿ, ಸೌತೆಕಾಯಿ, ಟೊಮೆಟೊ ಅಥವಾ ಇತರೇ ತರಕಾರಿಗಳನ್ನು ಹೆಚ್ಚಿ ಫ್ರಿಡ್ಜ್ ನಲ್ಲಿ 1/2 ಗಂಟೆ ಇಟ್ಟು ಉಪಯೋಗಿಸಿದರೆ ರುಚಿ ಹೆಚ್ಚುತದೆ.
10) ಟೀ ಮಾಡುವಾಗ ಸ್ವಲ್ಪ ಏಲಕ್ಕಿ ಪುಡಿ ಹಾಕಿದರೆ ಘಮ್ಮನೆಯ ಚಹಾ ಮತ್ತಷ್ಟು ರುಚಿ ಪಡೆಯುತ್ತದೆ. ಏಲ್ಲಕ್ಕಿ ಉಪಯೋಗಿಸಿದ ಮೇಲೆ ಸಿಪ್ಪೆಯನ್ನು ಬಿಸಾಡುವ ಬದಲು ಟೀ ಡಬ್ಬದಲ್ಲಿ ಹಾಕಿಡಿ.
11) ಸಾರಿನಲ್ಲಿ ಉಪ್ಪು ಜಾಸ್ತಿಯಾದರೆ ಆಲುಗಡ್ಡೆಯ ಚೂರುಗಳನ್ನು ಹಾಕಿ ಬೇಯಿಸಿ. 1/2 ಗಂಟೆಯಾದ ಮೇಲೆ ಮೆಲ್ಲಗೆ ತೆಗೆಯಿರಿ.
12) ಸಾರಿಗೆ ಖಾರ ಜಾಸ್ತಿಯಾದರೆ ಟೊಮೆಟೊ ಹಣ್ಣನ್ನು ಹಾಕಿ ಬೇಯಿಸಿ.
13) ಮಜ್ಜಿಗೆ ತುಂಬಾ ಹುಳಿಯಾದರೆ ಜಾಸ್ತಿ ನೀರು ಹಾಕಿ ಒಂದೆರಡು ಗಂಟೆಗಳ ಕಾಲ ಇಡಿ. ಆಮೇಲೆ ಮೇಲಿನ ತಿಳಿ ನೀರನ್ನು ಚೆಲ್ಲಿದಾಗ ಹುಳಿ ಮಾಯವಾಗಿರುತ್ತದೆ.
14) ದೋಸೆ ಮಾಡುವಾಗ ದೋಸೆ ಕಾವಲಿಗೆ ಕಚ್ಚುತ್ತಿದ್ದರೆ ಒಂದು ಈರುಳ್ಳಿಯನ್ನು 1/2 ಮಾಡಿ ಕಾವಲಿಗೆ ತಿಕ್ಕಿ ದೋಸೆ ಹುಯ್ಯಿರಿ.
15) ತರಕಾರಿ ಬೇಯಿಸುವಾಗ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಬೇಕು. ಅಲ್ಯುಮಿನಿಯಂದಾದರೆ ತರಕಾರಿ ಕಪ್ಪಾಗುವುದು.

1. ಇಡ್ಲಿ ಮೆತ್ತಗೆ ಹೂವಿನ ಹಾಗೆ ಆಗಲು;

* ಅಕ್ಕಿ ನೆನೆ ಹಾಕುವಾಗ ತಣ್ಣೀರಿನ ಬದಲಿಗೆ ಬಿಸಿನೀರನ್ನು ಹಾಕಿ.
* ಅಕ್ಕಿ ನೆನೆ ಹಾಕುವಾಗ ಎರಡು ಹಿಡಿ ಅವಲ್ಲಕ್ಕಿಯನ್ನು ಹಾಕಿ.
* ಇಡ್ಲಿ ಅಕ್ಕಿಯನ್ನೇ ಉಪಯೋಗಿಸಿದರೆ ಮೃದುವಾಗಿ ಬರುವುದು.

2. ದೋಸೆ ಗರಿ ಗರಿಯಾಗಿ ಬರಲು;

* ದೋಸೆ ಅಕ್ಕಿಯನ್ನೇ ತಂದು ನೆನೆಹಾಕಿ ಮಾಡಿದರೆ ದೋಸೆ ಚೆನ್ನಾಗಿ ಬರುವುದು.
* ಅಕ್ಕಿ, ಉದ್ದಿನ ಬೇಳೆ ನಾನೆ ಹಾಕುವಾಗ ಅದರ ಜೊತೆ 1 ಹಿಡಿ ಅವಲಕ್ಕಿ ಹಾಕಿದರೆ ಕಾವಲಿಯಿಂದ ಸುಲಭವಾಗಿ ಮೇಲೆ ಏಳುತ್ತದೆ.
* ಅಕ್ಕಿಯ ಜೊತೆ 2 ಚಮಚ ಮೆಂತ್ಯೆ ನೆನೆ ಹಾಕಿದರೆ ಚೆನ್ನಾಗಿ ಉದುಗು ಬರುವುದಲ್ಲದೆ ಒಳ್ಳೆಯ ವಾಸನೆ ಇರುತ್ತದೆ.
* ಅಕ್ಕಿಯ ಜೊತೆ 2 ಚಮಚ ಕಡಲೆ ಬೇಳೆ ಹಾಕ್ಕಿದಲ್ಲಿ ದೋಸೆಗೆ ಒಳ್ಳೆಯ ಹೊಂಬಣ್ಣ ಬರುವುದು.
* ರುಬ್ಬಿದ ಹಿಟ್ಟಿಗೆ 1 ಚಮಚ ಸಕ್ಕರೆ ಹಾಕಿದರೆ ಒಳ್ಳೆಯ ಬಣ್ಣ ಬರುತ್ತದೆ.
* ಕಾವಲಿಗೆ 1 ಚಮಚ ಎಣ್ಣೆ ಹಾಕಿ ಸ್ವಲ್ಪ ಉಪ್ಪು, ಸಾಸಿವೆ ಹಾಕಿ ಸಿಡಿಸಿ ಚೆನ್ನಾಗಿ ಒರೆಸಿ ದೋಸೆ ಹಾಕಿದಾಗ, ಕಚ್ಚದೆ ದೋಸೆ ಚೆನ್ನಾಗಿ ಬರುವುದು.
* ಮಿಕ್ಕಿದ ದೋಸೆ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಕಾಯಿತುರಿ ಎಲ್ಲ ಹಾಕಿ ಪಡ್ಡು ಕಾವಲಿಗೆ ಹಾಕಿದರೆ ಪಡ್ಡು ಅಥವಾ ಗುಂಡುಪಂಗಳ ರೆಡಿ.

3 ಚಪಾತಿ ಮೃದುವಾಗಿ ಬರಲು;

* ಚಪಾತಿ ಕಲೆಸುವಾಗ 3 ಬಟ್ಟಲು ಅಳತೆಗೆ ಸರಿಯಾಗಿ 1 ಬಟ್ಟಲು ನೀರನ್ನು ಹಾಕಿ ಕಲೆಸಬೇಕು.
* 2 ಚಮಚ ಎಣ್ಣೆ ಹಾಕಿ ಕಲೆಸಿ ಚೆನ್ನಾಗಿ ನಾದಿದಲ್ಲಿ ಮೃದುವಾಗುವುದು.

4. ಪಲಾವ್ ಅಥವಾ ಬಾತ್ ಗಳನ್ನು ಮಾಡುವಾಗ ನಿಂಬೆ ರಸ ಹಿಂಡಿದರೆ ಉದುರಾಗುತ್ತದೆ.
5. ಕರಿಬೇವು ಸೊಪ್ಪನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿ ಇಟ್ಟುಕೊಂಡ್ಡಿದ್ದರೆ ಅಡುಗೆಗಳಿಗೆ ಬೇಕಾದಾಗ ಉಪಯೋಗಿಸಬಹುದು.
6. ಮೊಟ್ಟೆಯನ್ನು ಬೇಯಿಸುವಾಗ ಉಪ್ಪನ್ನು ಹಾಕಿದಲ್ಲಿ ಹೊರಬಾಗ ಒಡೆಯದೆ ಸಿಪ್ಪೆ ಸಲಿಸಾಗಿ ಬರುವುದು.
7. ಹುರುಳಿಕಾಯಿ, ಗೋರಿಕಾಯಿ ಪಲ್ಯಗಳನ್ನು ಬೇಯಿಸುವಾಗ 1/2 ಚಮಚ ಸಕ್ಕರೆ ಹಾಕಿದರೆ ರುಚಿ ಬರುವುದಲ್ಲದೆ, ಬೆಂದ ಮೇಲೆ ತರಕಾರಿಯ ಹಸಿರು ಬಣ್ಣ ಹಾಗೆ ಇರುವುದು.
8. ಏಲ್ಲಕ್ಕಿ ಡಬ್ಬಿಯಲ್ಲಿ ಮೆಣಸು ಕಾಳು ಹಾಕಿಟ್ಟರೆ ವಾಸನೆ ಹಾಗೆ ಇದ್ದು ಬೇಗ ಕೆಡುವುದಿಲ್ಲ.
9. ಸಾರಿಗೆ ಬೇಳೆ ಬೇಯಲು ಇಡುವಾಗ ಅರಿಸಿನ, 1/2 ಚಮಚ ಎಣ್ಣೆ ಹಾಕಿದರೆ ಬೇಗ ಬೆಂದು ಕಟ್ಟು ಚೆನ್ನಾಗಿ ಬಿಡುವುದು.
10. ಬಜ್ಜಿ, ಬೋಂಡ, ವಡೆಗಳನ್ನು ಮಾಡುವಾಗ 4 ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿಕೊಂಡರೆ ಗರಿ ಗರಿಯಾಗಿ ಚೆನ್ನಾಗಿ ಬರುವುದು.

ಸಬ್ಬಸಿಗೆ ಸೊಪ್ಪು ಮತ್ತು ಹೀರೆಕಾಯಿ ಭಾತ್



ಸಬ್ಬಸಿಗೆ ಸೊಪ್ಪು ಚಪಾತಿಯೊಡನೆಯಾಗಿಲಿ ಅನ್ನದೊಡನೆಯಾಗಿಲಿ ತಿನ್ನಲು ರುಚಿಕರ ಸೊಪ್ಪು ಮಾತ್ರವಲ್ಲ ಹೇರಳ ಕಬ್ಬಿಣದ ಅಂಶ ಹೊಂದಿರುವುದರಿಂದ ಆರೋಗ್ಯವರ್ಧನೆಗೂ ಸಹಕಾರಿಯಾಗಿದೆ. ಬೊಜ್ಜು ಕರಗಿಸಬೇಕೆಂದರೆ, ಬಾಳಂತಿಯಲ್ಲಿ ಎದೆಯ ಹಾಲು ಹೆಚ್ಚಿಗೆ ಉತ್ಪಾದನೆಯಾಗಬೇಕೆಂದರೆ ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡಿ ನೀಡುತ್ತಾರೆ. ಹಾಗೆಯೇ ಸಬ್ಬಸಿಗೆ ಸೊಪ್ಪಿನಿಂದ ಮಾಡಿದ ಹೀರೆಕಾಯಿ ಭಾತ್ ಸಖತ್ತು ರುಚಿಯಾಗಿರುತ್ತದೆ.

ಬೇಕಾಗುವ ಸಾಮಾನುಗಳು :

ಅಕ್ಕಿ 2 ಲೋಟ
ಸಬ್ಬಸಿಗೆ ಸೊಪ್ಪು 2 ಬಟ್ಟಲು
ಹೀರೆಕಾಯಿ 1
ಕ್ಯಾರೆಟ್ 2
ಬೀನ್ಸ್ 1/2 ಬಟ್ಟಲು
ಆಲೂಗೆಡ್ಡೆ 1/2 ಬಟ್ಟಲು
ಬದನೇಕಾಯಿ1 /2 ಬಟ್ಟಲು
ಈರುಳ್ಳಿ 1/2 ಬಟ್ಟಲು
ಟೊಮೆಟೋ 2
ಎಣ್ಣೆ 1 ಬಟ್ಟಲು
ಸಾಸಿವೆ 1 ಚಮಚ
ಕರಿಬೇವು 8 ಎಸಳು
ಈರುಳ್ಳಿ 1 ಉದ್ದಕ್ಕೆ ಹೆಚ್ಚಿದ್ದು
ರುಚಿಗೆ ಉಪ್ಪು
ಒಂದು ನಿಂಬೆಹಣ್ಣಿನ ರಸ
ತುಪ್ಪ

ಮಸಾಲೆ ರುಬ್ಬಲು ಸಾಮಾನುಗಳು :

ಈರುಳ್ಳಿ 2
ಬೆಳ್ಳುಳ್ಳಿ 8 ಎಸಳು
ಬ್ಯಾಡಗಿ ಮೆಣಸಿನಕಾಯಿ 4 ಅಥವಾ ಅಚ್ಚಮೆಣಸಿನಪುಡಿ 1 ಚಮಚ
ದನಿಯಾ ಪುಡಿ 2 ಚಮಚ
ಸಾರಿನಪುಡಿ 1 ಚಮಚ
ಗರಂ ಮಸಾಲೆ 1/2 ಚಮಚ (ಇದ್ದರೆ)
ಚಕ್ಕೆ 2
ಲವಂಗ 3
ಶುಂಠಿ 1 ಇಂಚು
ತೆಂಗಿನತುರಿ 1 ಬಟ್ಟಲು
ಗಸಗಸೆ 1/4 ಚಮಚ

ಮಾಡುವ ವಿಧಾನ :

* ಮಸಾಲೆಗಾಗಿ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಹಾಕಿ ನುಣ್ಣೆಗ ರುಬ್ಬಿ ಇಟ್ಟುಕೊಳ್ಳಬೇಕು.
* ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ, ಈರುಳ್ಳಿ ಹಾಕಿ ಫ್ರೈ ಮಾಡಿರಿ.
* ಎಲ್ಲ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು, ಸಬ್ಬಸಿಗೆ ಸೊಪ್ಪನ್ನು ಹಾಕಿ ಎಣ್ಣೆಯಲ್ಲೇ ಚೆನ್ನಾಗಿ ಹುರಿಯಿರಿ. ಎಣ್ಣೆಯಲ್ಲಿ ಹುರಿದಾಗ ರುಚಿ ಹೆಚ್ಚುತ್ತದೆ.
* ಆಮೇಲೆ ರುಬ್ಬಿದ ಮಸಾಲೆ ಹಾಕಿ. ತೊಳೆದಿಟ್ಟುಕೊಂಡ ಅಕ್ಕಿ, 2 ಬಟ್ಟಲು ನೀರು (ರುಬ್ಬಿದ ಮಿಶ್ರಣದಲ್ಲೂ ಇರುವುದರಿಂದ ನೋಡಿ ಹಾಕಬೇಕು) ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ, ಕೊತ್ತಂಬರಿ ಸೊಪ್ಪು, ಹಾಕಿ ಮುಚ್ಹಿಡಬೇಕು.
* ನಿಂಬೆ ರಸ ಹಾಕುವುದರಿಂದ ಬಾತ್ ಉದುರು ಉದುರು ಆಗುವುದು.
* 1 ವಿಶಲ್ ಬಂದ ಕೂಡಲೇ ಉರಿ ಸಣ್ಣ ಮಾಡಿ ಸರಿಯಾಗಿ 4 ನಿಮಿಷವಾದನಂತರ ಕುಕ್ಕರ್ ಕೆಳಗಿಳಿಸಿಡಿ.
* ಅದು ತಣ್ಣಗಾದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ, ತುಪ್ಪ ಹಾಕಿ ಬಡಿಸುವುದು.
* (ಅವರೆಕಾಯಿ ಕಾಲದಲ್ಲಿ ಅವರೆಕಾಳನ್ನು ಹಾಕಿದರೆ ಇನ್ನು ಚೆನ್ನಾಗಿರುತ್ತದೆ)

******ಗೋಪಿಕಾರವೀಂದ್ರ

ಬಯಲು ಸೀಮೆಗಾಗಿ ಎಲೆಕೋಸು ಪತ್ರೊಡೆ

ಪತ್ರೊಡೆ ಎಂದಾಕ್ಷಣ ಮಲೆನಾಡು ಮತ್ತು ದಕ್ಷಿಣ ಕನ್ನಡ ಪ್ರಾದೇಶಿಕ ಆಹಾರ ತಿನಿಸು ಎಂದು ಭಾವಿಸಬೇಕಾಗಿಲ್ಲ. ನಿಮಗಿಂತ ನಾವು ಯಾವುದರಲ್ಲಿ ಕಮ್ಮಿ ಅಂತ ಕೇಳುತ್ತಿದ್ದಾರೆ ಬಯಲುಸೀಮೆಯ ಸೃಜನಶೀಲ ಗೃಹಿಣಿ!

ಪತ್ರೊಡೆ ಅಥವಾ ಪತ್ರಡೆ ಎಂದು ಕರೆಯುವ ಮಲೆನಾಡಿಗರ ಸ್ವಾದಿಷ್ಟ ತಿನಿಸು ಬರೀ ಮಲೆನಾಡಿಗಷ್ಟೇ ಸೀಮಿತವಲ್ಲ. ಪತ್ರೊಡೆ ಎಲೆ ಸಿಗದ ಬಯಲು ಸೀಮೆಯವರು ಸಹಾ ಎಲೆಕೋಸಿನ ಪತ್ರೊಡೆಯನ್ನು ಮಾಡಿ ಸವಿಯಬಹುದು. ನಿಮಗಿಂತ ನಾವೇನು ಕಮ್ಮಿ ಎಂದು ಮಲೆನಾಡಿಗರನ್ನು ಕೇಳಬಹುದು.

ಬೇಕಾಗುವ ಪಡಿಪದಾರ್ಥಗಳು:

ಸಣ್ಣಗೆ ತುರಿದ ಎಲೆಕೋಸು: ಕಾಲು ಕೆಜಿ
ಕೊತ್ತಂಬರಿ ಬೀಜ: ಒಂದು ಚಮಚ
ಮೆಂತ್ಯ: ಒಂದು ಚಮಚ
ಉದ್ದಿನ ಬೇಳೆ: ಒಂದು ಚಮಚ
ಕೆಂಪು ಮೆಣಸು: ಐದು ಕಾಳು
ಹುಣಸೆ ಹಣ್ಣು: ಒಂದು ನಿಂಬೆ ಗಾತ್ರದ್ದು
ಬೆಲ್ಲ: ನಾಲ್ಕು ಬೆರಳಿನಷ್ಟಗಲ
ಅರಿಶಿಣ: ಭರ್ತಿ ಒಂದು ಚಿಟಿಕೆ
ಕಾಯಿ ತುರಿ: ಒಂದು ಕಪ್‌
ಅಕ್ಕಿಯ ಸೋಜಿ: ಅರ್ಧ ಕಪ್‌
ಉಪ್ಪು : ನಿಮ್ಮ ಜಾಣ್ಮೆಯಾಂದಿಗೆ

ಮಾಡುವ ವಿಧಾನ :

ಮೆಣಸು, ಮೆಂತ್ಯ ಮತ್ತು ಉದ್ದಿನ ಬೇಳೆಯನ್ನು ಸ್ವಲ್ಪ ಹುರಿಯಬೇಕು. ತೆಂಗಿನ ಕಾಯಿ, ಕೊತ್ತಂಬರಿ ಬೀಜ, ಹುಣಸೇ, ಬೆಲ್ಲ , ಅರಿಶಿಣ ಮತ್ತು ಹುರಿದ ಈ ಮಿಶ್ರಣವನ್ನು ಅರೆಯಿರಿ. ಉಪ್ಪು ಸೇರಿಸಿ ಇನ್ನೊಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣ, ಅಕ್ಕಿ ಸೋಜಿ ಮತ್ತು ಕತ್ತರಿಸಿಟ್ಟಿರುವ ಎಲೆಕೋಸಿನ ಜೊತೆ ಚೆನ್ನಾಗಿ ಕಲೆಸಿ. ಕಡಿಮೆ ನೀರು ಸೇರಿಸಬೇಕು. ನಂತರ ಮಿಶ್ರಣವನ್ನು ಲಡ್ಡುವಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಉಂಡೆ ಮಾಡಿ ಅರ್ಧ ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.

ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ, ಎರಡು ಚಿಟಿಕೆಯಷ್ಟು ಉದ್ದಿನ ಬೇಳೆ , ಸಾಸಿವೆ, ಕರಿಬೇವಿನಸೊಪ್ಪು ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಬೆಂದ ಎಲೆಕೋಸು ಪತ್ರೊಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಗ್ಗರಣೆ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಸಿಹಿಯಾಗಿರಬೇಕಿದ್ದರೆ ಬೆಲ್ಲ ಒಂದಿಷ್ಟು ಹೆಚ್ಚು, ಖಾರ ಬೇಕಿದ್ರೆ ಎರಡು ಮೆಣಸು ಜಾಸ್ತಿ . ಹೀಗೆ ಪತ್ರೊಡೆ ಪರಿಣತರಾಗುತ್ತಿದ್ದಂತೆ ನಿಮ್ಮದೇ ಆದ ಕೈಗುಣದ ಛಾಪು ಒತ್ತಿರುತ್ತೀರಿ.

ಎಲೆಕೋಸಿಗೆ ಬದಲಿಗೆ ಕೆಸುವಿನೆಲೆ ಅಥವಾ ತಗತ್ತೆ ಸೊಪ್ಪನ್ನೂ ಹೆಚ್ಚಿ ಪತ್ರೊಡೆ ಮಾಡಬಹುದು. ನಿಮ್ಮ ಅಡುಗೆ ಲೆಕ್ಕಾಚಾರಗಳು ಒಂದು ಹದಕ್ಕೆ ಬಂದ ಮೇಲೆ ನಿಮಗೇ ಅಂದಾಜಾಗುತ್ತದೆ.

***ಗೋಪಿಕಾರವೀಂದ್ರ.

Tuesday, December 1, 2009

ಸಿಹಿ ತಿನಿಸುಗಳ ರಾಜ ಶ್ರೀಖಂಡ



ಈ ಸಿಹಿ ತಿನಿಸಿಗೆ ಶ್ರೀಖಂಡ ಎಂಬ ವಿಚಿತ್ರ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಒಬ್ಬಟ್ಟು ಅಥವಾ ಹೋಳಿಗೆಗಳಿಲ್ಲದೇ ಅನೇಕ ಹಬ್ಬಗಳು ಹೇಗೆ ಮುಂದೆ ಸಾಗುವುದಿಲ್ಲವೋ, ಉತ್ತರ ಕರ್ನಾಟಕದಲ್ಲಿ ಶ್ರೀಖಂಡವಿಲ್ಲದೆ ಅನೇಕ ಹಬ್ಬಹರಿದಿನಗಳಲ್ಲಿ ಊಟ ಮುಕ್ತಾಯವಾಗುವುದಿಲ್ಲ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಶ್ರೀಖಂಡ ಸರ್ವೇಸಾಮಾನ್ಯವಾಗಿ ತಯಾರಿಸುವ ಸಿಹಿತಿನಿಸು.

ಇನ್ನು ಇದರ ರುಚಿಯೋ... ಭೇಷ್ ಭೇಷ್ ಅನ್ನುವಷ್ಟು ಸಖತ್ತಾಗಿರುತ್ತದೆ. ಈ ಸಿಹಿಯನ್ನು ಊಟದ ಜೊತೆ ಮಾತ್ರವಲ್ಲ ತಿಂಡಿಯೊಡನೆಯೂ ತಿನ್ನಬಹುದು. ಅದರಲ್ಲೂ ಪೂರಿಯೊಂದಿಗೆ ಶ್ರೀಖಂಡ ಹೇಳಿ ಮಾಡಿಸಿದ ಜೋಡಿ. ತಿಂದರೆ ಪೂರಿಗಳ ಲೆಕ್ಕ ಸಿಗಲಿಕ್ಕಿಲ್ಲ, ಬಿಟ್ಟರೆ ಶ್ರೀಖಂಡದ ರುಚಿ ದಕ್ಕಲಿಕ್ಕಿಲ್ಲ.

ಇದನ್ನು ತಯಾರಿಸುವ ಬಗೆ ತುಂಬಾ ಕ್ಲಿಷ್ಟಕರವಾಗಿರಬಹುದೆಂದೇನಾದರೂ ನೀವು ಊಹಿಸಿದ್ದರೆ, ನಿಮ್ಮ ಊಹೆಯನ್ನು ಪಕ್ಕಕ್ಕಿಡಿ. ಬೇರೆ ಯಾವುದೇ ಸಿಹಿಯನ್ನು ತಯಾರಿಸುವುದಕ್ಕಿಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದನ್ನು ನಂಬಲು ಒಮ್ಮೆ ಮನೆಯಲ್ಲಿಯೇ ಶ್ರೀಖಂಡ ತಯಾರಿಸಿ ನೋಡಿ.

ಬೇಕಾಗುವ ಪದಾರ್ಥಗಳು

* ಗಟ್ಟಿ ಮೊಸರು 6 ಬಟ್ಟಲು
* ಸಕ್ಕರೆ 3 ಬಟ್ಟಲು
* ಕೇಸರಿ ಬಣ್ಣ
* ಏಲಕ್ಕಿ ಪುಡಿ
* ಗೋಡಂಬಿ, ಒಣದ್ರಾಕ್ಷಿ, ಬಾದಾಮಿ

ಮಾಡುವ ವಿಧಾನ

ಉತ್ತಮ ಗುಣಮಟ್ಟದ ಹಾಲು ತಂದು ಬೆಳಿಗ್ಗೆಯೇ ಹೆಪ್ಪು ಹಾಕಿ. ಸಾಯಂಕಾಲದ ಹೊತ್ತಿಗೆ ಮೊಸರಾಗುತ್ತಿದ್ದಂತೆ ಅದನ್ನು ತೆಳ್ಳನೆಯ ಬಟ್ಟೆಯಲ್ಲಿ ಸುರಿದು ಗಂಟುಕಟ್ಟಿ ಗೂಟಕ್ಕೆ ನೇತು ಹಾಕಿ. ಬೆಳಗಿನ ಜಾವಕ್ಕೆ ನೀರೆಲ್ಲ ಬಸಿದನಂತರ ಒಂದು ಪಾತ್ರೆಗೆ ತೆಗೆದು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ. ಜೊತೆಜೊತೆಗೇ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಹಾಕಿ ಕೈಯಾಡಿಸಿ. ಮೊಸರು ಹುಳಿಯಾಗಿರುವುದರಿಂದ ರುಚಿಗೆ ತಕ್ಕಷ್ಟು ಸಕ್ಕರೇ ಸೇರಿಸಿ. ದಟ್ಸಾಲ್! ಸಿಹಿಸಿಹಿ ಶ್ರೀಖಂಡ ರೆಡಿ.

ಇದನ್ನು ಪೂರಿ ಅಥವಾ ಚಪಾತಿಯೊಂದಿಗೆ ತಾಜಾ ಇರುವಾಗಲೇ ತಿನ್ನಬಹುದು. ಅಥವಾ ಬೇಸಿಗೆಯಲ್ಲಿ ಅದನ್ನು ಫ್ರಿಜ್ಜಲ್ಲಿ ಇಟ್ಟು ತಣ್ಣಗಾದ ನಂತರ ಮೆಲ್ಲಬಹುದು, ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳನ್ನು ಶ್ರೀಖಂಡಕ್ಕೆ ಸೇರಿದರೆ ಅದರ ರುಚಿ ಮತ್ತಷ್ಟು ಜಾಸ್ತಿಯಾಗುತ್ತದೆ.