Tuesday, November 2, 2010

ರಾಗಿ ಕೀಲಸ ಅಥವಾ ರಾಗಿ ಹಲ್ವಾ



ಬೇಕಾಗುವ ಸಾಮಾಗ್ರಿಗಳು:
ರಾಗಿ -ಒಂದು ಕಪ್
ಸಕ್ಕರೆ ಅಥವಾ ಬೆಲ್ಲ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ
ಗೋಡಂಬಿ ಸ್ವಲ್ಪ( ಬೇಕಾದರೆ)

ತಯಾರಿಸುವ ವಿಧಾನ:
ರಾಗಿಯನ್ನು ಹಿಂದಿನ ದಿನ ರಾತ್ರಿಯೇ ನೀರಿನಲ್ಲಿ ಚೆನ್ನಾಗಿ ತೊಳೆದು, ನೆನೆಸಿಡಿ, ಮಾರನೇ ದಿನ ಅದನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಸೋಸಿಕೊಂಡು, ಸೋಸಿದಾಗ ಬರುವಂತ ರಾಗಿ ಪುಡಿಗೆ ಮತ್ತೆ ನೀರು ಸೇರಿಸಿ ರುಬ್ಬಿ, ಸೋಸಿಕೊಳ್ಳಿ. ರಾಗಿಯ ಹಾಲು [^] ಬರುವವರೆಗು ಹೀಗೆ ಒಂದೆರಡು ಬಾರಿ ರುಬ್ಬಿ ಸೋಸಿಕೊಳ್ಳಿ.

ರಾಗಿಯ ಹಾಲು ಗಟ್ಟಿಯಾಗಿ ತೆಗೆದುಕೊಂಡ ನಂತರ ಅದರ ತಿರುಳನ್ನು ಬಿಸಾಕಿ, ತೆಗೆದ ಹಾಲಿಗೆ, ಬೆಲ್ಲ ಮತ್ತು ಹಸಿಹಾಲು ಹಾಕಿ ಒಲೆಯ ಮೇಲೆ ದಪ್ಪ ತಳದ ಪಾತ್ರೆಗೆ ಹಾಕಿ ಕುದಿಯಲು ಇಟ್ಟು, ಅದನ್ನು ಕೈ ಬಿಡದೆ ತಿರುಗಿಸುತ್ತಿರಿ, ಕೈಗೆ ಸಿಡಿಯುತ್ತದೆ ಹುಷಾರಾಗಿರಿ. ಸ್ವಲ್ಪ ಉದ್ದವಿರುವ ಸೌಟ್ ತೆಗೆದುಕೊಳ್ಳಿ ತಿರುವಲು.

ಇದನ್ನು ಚೆನ್ನಾಗಿ ಬೇಯಿಸಬೇಕು. ನೋಡು ನೋಡುತ್ತಿದ್ದಂತೆ ಬೇಗ ಗಟ್ಟಿಯಾಗುತ್ತದೆ. ಹಾಗೂ ಬೇಗ ತಳ ಹಿಡಿಯುತ್ತದೆ ಸಹ. ಹಾಗಾಗಿ ಮೊದಲೆ ಒಂದು ತಟ್ಟೆಗೆ ತುಪ್ಪ ಸವರಿಟ್ಟುಕೊಂಡಿರಿ. ತಿರುವುತ್ತಿರುವಾಗಲೇ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ, ಈ ಮಿಶ್ರಣವು ಹಲ್ವದ ಹದಕ್ಕೆ ಬಂದ ತಕ್ಷಣ ಜಿಡ್ಡು ಸವರಿದ ತಟ್ಟೆಗೆ ಸುರಿದು, ಮೇಲೆ ಗಸಗಸೆ, ಕೊಬ್ಬರಿತುರಿ ಮತ್ತು ಗೋಡಂಬಿಯಿಂದ ಅಲಂಕರಿಸಿ.

ನಿಮಗೆ ಯಾವ ರೀತಿ ಬೇಕೋ ಆ ತರಹ ಕತ್ತರಿಸಿ, ಅಲಂಕರಿಸಿ. ತಿನ್ನಲು ರುಚಿಯಾದ ಮತ್ತು ತಂಪಾದ ರಾಗಿಯ ಹಲ್ವ ತಯಾರ್. ಇದನ್ನು ಸ್ವಲ್ಪ ತಣ್ಣಗಾದ ಮೇಲೆ ತಿನ್ನಬೇಕು. ರಾತ್ರಿ ಕೀಲಸ ತಯಾರಿಸಿಟ್ಟು ಬೆಳಗ್ಗೆ ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಆರೋಗ್ಯಕರವಾದ, ಪೌಷ್ಟಿಕಾಂಶಗಳಿರುವ ಅನಾರೋಗ್ಯಕ್ಕೆ ರಾಮಬಾಣವಾದ ರಾಗಿಯಲ್ಲಿ ತಯಾರಿಸಿದ ರಾಗಿಯ ಕೀಲಸ ಅಥವಾ ರಾಗಿಯ ಹಲ್ವ ಸಿದ್ಧವಾಗುತ್ತದೆ.

* ರಾಗಿಯ ಹಿಟ್ಟಿನಲ್ಲೂ ತಯಾರಿಸಬಹುದು, ಆದರೆ ಅದು ರಾಗಿಯನ್ನು ರುಬ್ಬಿ ತಯಾರಿಸಿದಷ್ಟು ರುಚಿಯಿರುವುದಿಲ್ಲ.
* ಬೆಲ್ಲವನ್ನು ಹಾಕಿದರೆ ಹೆಚ್ಚು ರುಚಿಯಾಗಿರುತ್ತದೆ.
* ರೆಫ್ರಿಜರೇಟರ್ ನಲ್ಲಿ ಇಟ್ಟರೆ ಮೂರರಿಂದ ನಾಲ್ಕು ದಿನ ಚೆನ್ನಾಗಿ ಇರುತ್ತದೆ. ಹೊರಗಿಟ್ಟರೆ ಒಂದು ದಿನ ಮಾತ್ರ ಚೆನ್ನಾಗಿರುತ್ತದೆ.

-thats kannada inda..