Thursday, October 15, 2009

ಕ್ಯಾರಟ್ ಪಾಲಕ್ ಮಸಾಲೆ ಅನ್ನನಿಮಗೆ ಮೂರ್ನಾಲ್ಕು ಬಗೆಯ ಅಡಿಗೆ ಮಾಡಲು ಸಮಯವಿಲ್ಲದಾಗ, ಇಲ್ಲವೇ ಬೇರೆ ಬಗೆಯ ಊಟ ಮಾಡಬೇಕೆನ್ದೆನಿಸಿದಾಗ ಅಥವಾ ಊಟದ ಡಬ್ಬಿಗೆ ಹೊಸತೆನಾದರೂ ಬೇಕೆನಿಸಿದಾಗ ಮಾಡಬಹುದಾದ ಒಂದು ಸರಳ, ರುಚಿಕರ, ಆರೋಗ್ಯಕರ ಉಪಾಯ.

ಬೇಕಾದ ಪದಾರ್ಥಗಳು :

3 ಕಪ್ ಬಿಸಿಯಾಗಿ ಉದುರಾಗಿ ಮಾಡಿಟ್ಟುಕೊಂಡ ಅನ್ನ
1 ಈರುಳ್ಳಿ
2 ಮಧ್ಯಮ ಗಾತ್ರದ ಟೊಮೇಟೊ
2 ಕಪ್ ಹೆಚ್ಚಿದ ಪಾಲಕ್/ಸ್ಪಿನಾಚ್
2 ದೊಡ್ಡ ಕ್ಯಾರಟ್, ತುರಿದದ್ದು
2 ಚಮಚ ಜೀರಿಗೆ-ಕೊತ್ತಂಬರಿ ಪುಡಿ
2 ಚಮಚ ಮೆಣಸಿನಪುಡಿ
1/2 ಚಮಚ ಅರಿಶಿಣಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಚಮಚ ಸಾಸಿವೆ
ಎಣ್ಣೆ, ಕೊತ್ತಂಬರಿ ಸೊಪ್ಪು, ಉಪ್ಪು, ಚಿಟಿಕೆ ಸಕ್ಕರೆ

ತಯಾರಿಸುವ ವಿಧಾನ :

ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ, ಸಾಸಿವೆ, ಅರಿಶಿಣ, ಜೀರಿಗೆ ಪುಡಿ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಇದಕ್ಕೆ ಈರುಳ್ಳಿಯನ್ನು ಉದ್ದುದ್ದಕ್ಕೆ ಹೆಚ್ಚಿ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಟೊಮೇಟೊ ಹೆಚ್ಚಿ ಸೇರಿಸಿ. ಸ್ವಲ್ಪ ಉಪ್ಪು, ಸಕ್ಕರೆ, ಮೆಣಸಿನಪುಡಿ, ಗರಂ ಮಸಾಲೆ ಪುಡಿ ಸ್ವಲ್ಪ ಬೇಕಿದ್ದರೆ ಸೇರಿಸಿ ಮುಚ್ಚಿ ಬೇಯಿಸಿರಿ.

ಈ ಮಿಶ್ರಣ ಪೆಸ್ಟಿನಂತೆ ಬೆಂದಾಗ ಕ್ಯಾರಟ್, ಪಾಲಕ್ ಸೇರಿಸಿ, ಮತ್ತೆ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿರಿ. ಈ ಮಿಶ್ರಣ ಹದವಾಗಿ ಬೆಂದಾಗ ಅನ್ನ, ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ, ಇನ್ನೆರಡು ನಿಮಿಷ ಬೇಯಿಸಿ. ತಟ್ಟೆಗೆ ಬಡಿಸಿ, ಒಂದು ಚಮಚ ತುಪ್ಪ, ಚೂರು ಲಿಂಬೆಹಣ್ಣಿನೊಂದಿಗೆ ಜಮಾಯಿಸಿ. ಜೊತೆಗೊಂದಿಷ್ಟು ಗಟ್ಟಿ ಮೊಸರಿದ್ದರೆ ಅದರ ಮಜಾನೇ ಬೇರೆ.

Sunday, October 11, 2009

ಬಾಸುಮತಿ ಮತ್ತು ಬದನೇಕಾಯಿ ಪಲಾವ್ಬೇಕಾಗುವ ಸಾಮಗ್ರಿಗಳು:

ಬಾಸುಮತಿ ಅಕ್ಕಿ 1/4 ಕೆಜಿ, ಏಲಕ್ಕಿ 2, ಲವಂಗ : 2, ದಾಲ್ಚಿನಿ 3, ಇಂಚಿನತುಂಡು 1/2, ದೊಡ್ಡಗಾತ್ರದ ಈರುಳ್ಳಿ 2, ತುಪ್ಪ 3 ಚಮಚ, ಎಳೇಬದನೇಕಾಯಿ 1/4 ಕೆಜಿ, ಸಾಸಿವೆ 1/2 ಚಮಚ, ಅರಶಿನಪುಡಿ 1/4 ಚಮಚ, ಇದಕ್ಕೆ ಸರಿಹೊಂದುವಂತೆ ಉಪ್ಪು , ಕರಿಬೇವಿನಸೊಪ್ಪು ಸ್ವಲ್ಪ, ಗೋಡಂಬಿ 10.

ರುಬ್ಬಿಕೊಳ್ಳಬೇಕಾದ ಪದಾರ್ಥಗಳು:

ತಾಜಾ ತೆಂಗಿನಕಾಯಿತುರಿ 1 ಚಮಚ, ಕಪ್ಪುಮೆಣಸು 1/4 ಚಮಚ, ಕೊತ್ತಂಬರಿಬೀಜ 1 1/2 ಚಮಚ, ಕಡಲೆ ಬೇಳೆ 1 ಚಮಚ, ಉದ್ದಿನಬೇಳೆ 1/2 ಚಮಚ, ಕೆಂಪು ಮೆಣಸಿನಕಾಯಿ 4, ಇಂಗು 1 ಚುಟುಕೆ. (ಮೇಲೆ ಪಟ್ಟಿ ಮಾಡಿರುವ ಎಲ್ಲಾ ಪದಾರ್ಥಗಳನ್ನು 1/2 ಚಮಚ ಎಣ್ಣೆಯಲ್ಲಿ ಹುರಿಯಿರಿ ಮತ್ತು ತೆಂಗಿನಕಾಯಿಯೊಂದಿಗೆ ರುಬ್ಬಿಟ್ಟುಕೊಳ್ಳಿ)

ತಯಾರಿಸುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು 10 ನಿಮಿಷ ನೀರಿನಲ್ಲಿ ನೆನೆಸಿರಿ. ನೆನೆದ ಅಕ್ಕಿಯಿಂದ ಅನ್ನ ಮಾಡಿದರೆ ಗ್ಯಾಸ್ ಉಳಿಯತ್ತೆ. ಭಾರವಾದ ಪಾತ್ರೆಯೊಂದನ್ನು ಒಲೆ ಮೇಲೆ ಮೇಲಿಟ್ಟು, 2 ಚಮಚ ತುಪ್ಪ ಬಿಸಿ ಮಾಡಿರಿ. ಇದರಲ್ಲಿ ದಾಲ್ಚಿನಿ, ಲವಂಗ, ಏಲಕ್ಕಿ ಮತ್ತು ಸೀಳಿಕೊಂಡ ಈರುಳ್ಳಿಯನ್ನು ಹುರಿಯಿರಿ. ಇದು ಕೆಂಪಾದ ನಂತರ, ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.

ಇದಕ್ಕೆ ಎರಡು ಲೋಟ ಬಿಸಿನೀರು ಮತ್ತು ಉಪ್ಪು ಸೇರಿಸಿರಿ. ಚೆನ್ನಾಗಿ ಕೆದಕಿ ಮುಚ್ಚಳ ಹಾಕಿ ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷ ಅನ್ನ ಬೇಯಿಸಿರಿ ನಂತರ ಒಲೆಯಿಂದ ಕೆಳಗಿಳಿಸಿರಿ. ಬದನೇಕಾಯಿಯನ್ನು ಉದ್ದುದ್ದವಾಗಿ ಸೀಳಿಕೊಂಡು, ಉಪ್ಪು ಬೆರೆಸಿದ ನೀರಿನಲ್ಲಿ ನೆನೆಸಿರಿ. ಮಿಕ್ಕಿರುವ ತುಪ್ಪವನ್ನು ಬಿಸಿಮಾಡಿ, ಅದರಲ್ಲಿ ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಬದನೇಕಾಯಿಯನ್ನು ಹುರಿಯಿರಿ. ಅದು ಬೆಂದ ನಂತರ ಅದಕ್ಕೆ ರುಬ್ಬಿಕೊಂಡ ಮಸಾಲೆ ಸೇರಿಸಿ ಒಳ್ಳೆ ಪರಿಮಳ ಬರುವವರೆಗೆ ಹುರಿಯಿರಿ. ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿರಿ. ಅನ್ನ ಮಾಡಿಟ್ಟುಕೊಂಡ ಪಾತ್ರೆಯನ್ನು ಮತ್ತೆ ಒಲೆಯ ಮೇಲಿರಿಸಿ ಬದನೆಕಾಯಿಯನ್ನು ಸೇರಿಸಿ. ಒಂದು ಚಮಚ ತುಪ್ಪದೊಂದಿಗೆ ಮೃದುವಾಗಿ ಬೆರೆಸಿರಿ. ಒಂದೆರಡು ನಿಮಿಷ ಕೈಯಾಡಿಸಿ ಪಾತ್ರೆಯನ್ನು ಕೆಳಗಿಳಿಸಿ ಬಿಸಿಬಿಸಿಯಾಗಿ ಬಡಿಸಿರಿ.

ಶಾಕಾಹಾರಿಗಳಿಗಾಗಿ ಬನಾನಾ ಕಬಾಬ್!ಚಿಕ್ಕನ್ ಕಬಾಬ್, ಮಟನ್ ಕಬಾಬ್ ಎಂದು ಬಾಯಿ ಚಪ್ಪರಿಸಿ ಮಾಂಸಹಾರಿಗಳು ತಿನ್ನುವಾಗ, ನೀವೇಕೆ ಬನಾನಾ ಕಬಾಬ್ ಸವಿಯಬಾರದು? ಯಾವುದೇ ಸಂದರ್ಭವಿರಲಿ, ಇಲ್ಲದಿರಲಿ ಬಿಸಿಬಿಸಿ ಬನಾನಾ ಕಬಾಬ್ ನಿಮ್ಮ ಹೊಟ್ಟೆಗಿಳಿಯಲಿ.

ಅಗತ್ಯವಾದ ಸಾಮಾಗ್ರಿಗಳು:

ದಪ್ಪನೆಯ ನೇಂದ್ರ ಬಾಳೆ ಕಾಯಿ: ಒಂದು ಕಿಲೋ
ಮೈದಾ: 2ಕಪ್
ಅರಿಶಿಣ ಪುಡಿ: ಅರ್ಧ ಚಮಚ
ಏಲಕ್ಕಿ ಪುಡಿ: ಒಂದು ಚಮಚ
ಸಕ್ಕರೆ: 4 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸೋಡಾ: ಚಿಟಿಕೆ
ಜೀರಿಗೆ ಒಂದು ಚಮಚದಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ ಸಹ ಬಹಳ ಸುಲಭ:

ಮೊದಲು ಬಾಳೆ ಕಾಯಿಯ ಸಿಪ್ಪೆಯನ್ನು ತೆಗೆದು ಬಿಡಿ. ಸಿಪ್ಪೆ ತೆಗೆದ ಬಾಳೆಹಣ್ಣನ್ನು ನಿಮ್ಮ ಮನಸ್ಸಿಗೆ ಇಷ್ಟವಾದಂತೆ ಉದ್ದುದ್ದಕ್ಕೆ ಅಥವಾ ಅಡ್ಡಡ್ಡಕ್ಕೆ ಸೀಳಿ. ಅವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿಡಿ.

ಆಮೇಲೆ ಮೈದಾ ಹಿಟ್ಟಿನೊಂದಿಗೆ ಅರಿಷಿಣ ಪುಡಿ, ಏಲಕ್ಕಿ ಪುಡಿ, ಸಕ್ಕರೆ, ಉಪ್ಪು, ಸೋಡಾ, ಜೀರಿಗೆ ಎಲ್ಲ ಸೇರಿಸಿಟ್ಟುಕೊಳ್ಳಿ. ಅದಕ್ಕೆ ನೀರು ಸೇರಿಸಿ ಎಲ್ಲೂ ಗಂಟಾಗದಿರುವ ಹಾಗೆ ಚೆನ್ನಾಗಿ ಕಲಸಿ. ಅದು ದೋಸೆ ಹಿಟ್ಟಿನಷ್ಟು ಅಳಕಾಗಿರಬೇಕು.

ಅಲ್ಲಿಗೆ ಶೇ.70ರಷ್ಟು ಕೆಲಸ ಮುಗಿದು ಹೋಯಿತು. ಬಾಣಲಿಯಲ್ಲಿನ ಎಣ್ಣೆ ಕಾದ ನಂತರ, ಬಾಳೇ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಬೋಂಡಾ ಕರಿದಂತೆ ಕೆಂಪಗಾಗುವ ತನಕ ಕರಿಯಿರಿ. ಆಮೇಲೆ ತಟ್ಟೆಗೆ ಬಿಸಿಬಿಸಿ ಬನಾನಾ ಕಬಾಬ್ ಬಾಕಿಕೊಂಡು ರುಚಿ ನೋಡಿ! ಜೊತೆಗೊಂದು ಕಪ್ ಬಿಸಿಬಿಸಿ ಕಾಫಿಯಿದ್ದರಂತೂ ಮಜವೋ ಮಜ.

ಇದನ್ನು ಹೆಂಗಳೆಯರ ಕಿಟ್ಟಿ ಪಾರ್ಟಿಗಳಲ್ಲಿ, ಸ್ನೇಹಿತರು ಬಂಧುಗಳು ಸೇರಿಕೊಂಡಾಗ, ಬನಾನಾ ಕಬಾಬ್ ತಿನ್ನಲೇಬೇಕೆನ್ನಿಸಿದಾಗ ಮತ್ತು ಹಾಗೆ ಸುಮ್ಮನೆ ಯಾವಾಗಲಾದರೊಮ್ಮೆ ಪ್ರಯೋಗಿಸಿ ನೋಡಿ.