Sunday, August 23, 2009
ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್
ಮಳೆಗಾಲ ಅಥವಾ ಚಳಿಗಾಲದ ಸಾಯಂಕಾಲ ಹೊತ್ತಿನಲ್ಲಿ ಬಾಯಿ ವಿಭಿನ್ನ ರುಚಿಯ ತಿನಿಸನ್ನು ಬೇಡುತ್ತಿದ್ದರೆ ಬಿಸಿಬಿಸಿ ಆಲೂಗಡ್ಡೆ ಕಟ್ಲೇಟ್ ಮಾಡಿ ಸವಿಯಿರಿ. ಕಟ್ಲೇಟಿನ ಜೊತೆ ಬಿಸಿಬಿಸಿ ಕಾಫಿ ಅಥವಾ ಚಹಾ ಹೀರುತ್ತಿದ್ದರೆ ಸಂಜೆ ಸರಿದದ್ದೇ ಗೊತ್ತಾಗುವುದಿಲ್ಲ.
ಬೇಕಾಗುವ ಸಾಮಗ್ರಿಗಳು :
ಮಧ್ಯಮ ಗಾತ್ರದ 2 ಆಲೂಗಡ್ಡೆ
ಈರುಳ್ಳಿ 1
ಸ್ವಲ್ಪ ತುರಿದ ಶುಂಠಿ, ಬೆಳ್ಳುಳ್ಳಿ
ಗರಮ್ ಮಸಲಾ 1/2 ಚಮಚ
ಜೋಳದ ಹಿಟ್ಟು 4 ಟೀ ಚಮಚ
ರವೆ ಹಿಟ್ಟು 3 ಟೀ ಚಮಚ
ಕೊತ್ತಂಬರಿ ಸೊಪ್ಪು 8-10 ಎಸಳು
ಒಗ್ಗರಣೆಗೆ ಸಾಸಿವೆ, ಉದ್ದಿನ ಬೆಳೆ, ಕಡಲೆ ಬೆಳೆ, ಕರಿಬೇವು
ಮಾಡುವ ವಿಧಾನ : ಆಲೂಗಡ್ಡೆಗಳನ್ನು ಚೆನ್ನಾಗಿ ಕುದಿಸಿ, ಅವು ಚೆನ್ನಾಗಿ ಬೆಂದ ನಂತರ ಕಿವುಚಿ ಒಂದೆಡೆ ತೆಗೆದಿಡಿ. ಸ್ಟೋವ್ ಮೇಲೆ ಒಂದು ಬಾಣಲೆಯನ್ನಿಟ್ಟು ಸ್ವಲ್ಪ ಎಣ್ಣೆ ಹಾಕಿ. ಅದರಲ್ಲಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ, ಗರಮ್ ಮಸಾಲೆ, ಹಸಿಮೆಣಸಿನ ಕಾಯಿ ಹಾಕಿ. ಅನಂತರ ಕಿವುಚಿಟ್ಟ ಆಲೂಗಡ್ಡೆಯನ್ನು ಅದರೊಳಗೆ ಸೇರಿಸಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಕಿ ಸ್ಟೋವ್‌ನಿಂದ ಕೆಳಗೆ ಇಳಿಸಿ. 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
ಇನ್ನೊಂದೆಡೆ ಜೋಳದ ಹಿಟ್ಟು ಮತ್ತು ರವೆಯನ್ನು ಸ್ವಲ್ಪ ಬಿಸಿ ನೀರನ್ನು ಹಾಕಿ ಬೆರೆಸಿಟ್ಟುಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಕಟ್ಲೇಟ್ ಆಕಾರಕ್ಕೆ ತಟ್ಟಿಕೊಳ್ಳಿ. ತಟ್ಟಿಕೊಂಡ ಆಲೂಗಡ್ಡೆ ಮಿಶ್ರಣದ ಎರಡು ಬದಿ ರವೆ ಹಿಟ್ಟು, ಜೋಳದ ಹಿಟ್ಟಿನ ಮಿಶ್ರಣ ಹಚ್ಚಿ. ನಂತರ ಸ್ಟೋವ್ ಹೊತ್ತಿಸಿ ಬೋಗುಣಿಯಲ್ಲಿ ಕಾಯ್ದ ಎಣ್ಣೆಯಲ್ಲಿ ಒಂದೊಂದೆ ಕಟ್ಲೇಟ್ ತೇಲಿ ಬಿಡಿ. ಕಟ್ಲೇಟ್ ಕೆಂಪಾದ ಬಳಿಕ ಹೊರ ತೆಗೆಯಿರಿ. ರುಚಿಯಾದ ಕಟ್ಲೇಟ್ ಈಗ ತಿನ್ನಲು ರೆಡಿ.
ಟೊಮೆಟೊ ಸಾಸ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಕಟ್ಲೇಟ್ ತಿನ್ನಲು ಚೆನ್ನಾಗಿರುತ್ತದೆ. ಚಳಿಗಾಲದಲ್ಲಿ ಕಟ್ಲೇಟಿನ ಜೊತೆ ಬಿಸಿಬಿಸಿ ಕಾಫಿ ಅಥವಾ ಚಹಾ ಹೀರುತ್ತಿದ್ದರೆ ಸಂಜೆ ಸರಿದದ್ದೇ ಗೊತ್ತಾಗುವುದಿಲ್ಲ.
Subscribe to:
Post Comments (Atom)
No comments:
Post a Comment