Tuesday, March 31, 2009
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!
ಹಾಗಲಕಾಯಿ ಒಂದು ಒಳ್ಳೆಯ ತರಕಾರಿ. ಕಹಿಯಿರುವುದರಿಂದ ಔಷಧೀಯ ಗುಣವೂ ಅದರಲ್ಲಿದೆ. ಹಾಗಲ ರುಚಿಯಲ್ಲಿ ಕಹಿಯಾದರೂ, ದೇಹಾರೋಗ್ಯಕ್ಕೆ ಸಿಹಿ. ಹಾಗಲದಂಥ ತರಕಾರಿಯಿಲ್ಲ ಎನ್ನುತ್ತಾರೆ ಅನುಭವಸ್ಥರು.
ತುಳುನಾಡಿನಲ್ಲಂತೂ ‘ಕಂಚಾಲ್ ಇತ್ತ್‌ಂಡಾ ಎಂಚಾಲಾ ಉಣೋಳಿ...’ (ಹಾಗಲಕಾಯಿ ಇದ್ದರೆ ಹೇಗೂ ಉಣ್ಣಬಹುದು) ಎಂಬ ನಾಣ್ಣುಡಿಯೇ ಇದೆ. ಹಾಗಲ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಎನ್ನುತ್ತಾಳೆ ಅಜ್ಜಿ . ಹಾಗಲ ಮಧುಮೇಹಕ್ಕೆ, ಅರ್ಥಾತ್ ಸಕ್ಕರೆ ಕಾಯಿಲೆಗೆ ರಾಮಬಾಣ ಎನ್ನುತ್ತಾರೆ ಅಳಲೇಕಾಯಿ ಪಂಡಿತಧಿರು. ಒಟ್ಟಾರೆ ಸಾರಾಂಶ ಇಷ್ಟೇ, ಹಾಗಲ ಎನ್ನುವುದು ತರಕಾರಿಯಷ್ಟೇ ಅಲ್ಲ , ಔಷಧಿಯೂ ಹೌದು. ಹಾಗಾಗಿ ರುಚಿಯಷ್ಟೇ ಅಲ್ಲ, ಆರೋಗ್ಯಭಾಗ್ಯವೂ ಹಾಗಲದಿಂದ ಲಭ್ಯ ಎಂದಾಯಿತು.
ಇಂತಿಪ್ಪ ಹಾಗಲಕಾಯಿಯಿಂದ ರುಚಿಯಾದ ಖಾದ್ಯಗಳ ಮಾಡುವುದು ಹೇಗೆ ? ಬನ್ನಿ, ಹಾಗಲಕಾಯಿಯ ಎರಡು ನಮೂನೆ ಪಲ್ಯಗಳನ್ನು ಹಾಗೂ ಚಟ್ನಿಯನ್ನು ಮಾಡೋಣ. ಮಾಡಿ ಸವಿಯೋಣ. ಸವಿದು ಆರೋಗ್ಯವಂತರಾಗೋಣ.
*
ಹಾಗಲಕಾಯಿ ಪಲ್ಯ
(ವಿಧಾನ 1)
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಕೊತ್ತಂಬರಿ - 3 ಟೇಬಲ್‌ಸ್ಪೂನ್
ಕೆಂಪು ಮೆಣಸು - 8 ಅಥವಾ 10
ತುರಿದ ತೆಂಗಿನಕಾಯಿ - 3/4 ಕಪ್
ಹುಣಿಸೆಹಣ್ಣು - 1/2 ನಿಂಬೆಗಾತ್ರದ್ದು
ಬೆಲ್ಲ - 100 ಗ್ರಾಮ್‌ನಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಹಾಗಲಕಾಯಿಯನ್ನು ಸಣ್ಣಕ್ಕೆ ಹೆಚ್ಚಿಕೊಂಡು, ಬಾಣಲೆಯಲ್ಲಿ ಎಣ್ಣೆ ಇಟ್ಟು, ಸಾಸಿವೆ ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಹಾಕಿ, ಸಾಸಿವೆ ಸಿಡಿದ ನಂತರ ಹಾಗಲಕಾಯಿಯನ್ನು ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕೊತ್ತಂಬರಿ, ಮೆಣಸು, ಕಾಯಿತುರಿ, ಬೆಲ್ಲ , ಹುಣಿಸೆ - ಇಷ್ಟನ್ನು ಮಿಕ್ಸಿಯಲ್ಲಿ ಅರೆದು, ಬೆಂದ ಹಾಗಲಕಾಯಿಗೆ ಹಾಕಿ ಇನ್ನೂ ಸ್ವಲ್ಪಹೊತ್ತು ಚೆನ್ನಾಗಿ ಕುದಿಸಬೇಕು.
ಘಂ ಎನ್ನುವ ಹಾಗೂ ಆರೋಗ್ಯಕರ ಹಾಗಲ ಪಲ್ಯ ಸಿದ್ಧ .
*
ಹಾಗಲಕಾಯಿ ಪಲ್ಯ : ವಿಧಾನ -2
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಹಸಿರು ಮೆಣಸು (ಕಾಯಿ) - 4 ಅಥವಾ 5
ಈರುಳ್ಳಿ 1 (ಮಧ್ಯಮ ಗಾತ್ರ)
ನಿಂಬೆ - 1 ಹೋಳು
ಕಾಯಿತುರಿ - 3-4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು .
ಮಾಡುವ ವಿಧಾನ : ಮೊದಲು ಕಡಲೆಬೇಲೆ-ಉದ್ದಿನಬೇಳೆ-ಸಾಸಿವೆ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನ ಹೋಳುಗಳನ್ನು ಸೇರಿಸಿ ಆಮೆಲೆ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟದ್ದು) ಹಾಕಿ. ಈರುಳ್ಳಿ ಸ್ವಲ್ಪ ಬಾಡಿದ ನಂತರ ಹಾಗಲಕಾಯಿ ಹಾಕಿ. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ತೆಂಗಿನಕಾಯಿ ಉದುರಿಸಿ ನಿಂಬೆರಸ ಸೇರಿಸಿ ಕಲಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲಿಕ್ಕೆ ಸಕತ್ತಾಗಿರುತ್ತದೆ!
*
ಹಾಗಲಕಾಯಿ ಚಟ್ನಿ
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಕಡಲೆ ಬೇಳೆ - 2 ಟೇಬಲ್‌ಸ್ಪೂನ್
ಉದ್ದಿನಬೇಳೆ - 2 ಟೇಬಲ್‌ಸ್ಪೂನ್
ಕೆಂಪು ಮೆಣಸು - 8 ಅಥವಾ 10
ಮಾಡುವ ವಿಧಾನ : ಕಡಲೆ ಬೇಳೆ, ಉದ್ದಿನಬೇಳೆ, ಕೆಂಪುಮೆಣಸನ್ನು ಜತೆಯಾಗಿ ಹುರಿದುಕೊಂಡು, ಹುಣಸೆಹಣ್ಣು , ಬೆಲ್ಲ , ಉಪ್ಪು, ಮತ್ತು ಹಾಗಲಕಾಯಿ (ಪ್ರತ್ಯೇಕವಾಗಿ ಹುರಿದದ್ದು) ಹಾಕಿ ಮಿಕ್ಸಿಯಲ್ಲಿ ಅರೆದರೆ ಚಟ್ನಿ ರೆಡಿ! ಅನ್ನಕ್ಕಾದರೂ ಸೈ, ಚಪಾತಿ-ರೊಟ್ಟಿಗಾದರೂ ಸರಿ.
ಹಾಗಲದ ಪದಾರ್ಥಗಳನ್ನು ತಿನ್ನಿ ; ಆರೋಗ್ಯವಂತರಾಗಿರಿ.
***ಗೋಪಿಕಾರವೀಂದ್ರ
Subscribe to:
Post Comments (Atom)
No comments:
Post a Comment