Tuesday, March 31, 2009

ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್



ಅಡುಗೆಮನೆಯೆಂಬ ಪ್ರಯೋಗಶಾಲೆಯಲ್ಲಿ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ನಡೆಯುತ್ತಿರಬೇಕು ಕೂಡ. ಬಳಸುವ ಪದಾರ್ಥಗಳಲ್ಲೇ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡರೆ ಹೊಸದೊಂದು ರುಚಿ ಹುಟ್ಟಿಕೊಂಡಿರುತ್ತದೆ. ಮಾಮೂಲಿ ಬಿಳಿ ಇಡ್ಲಿ ಸಾಂಬಾರ್ ಮೆಲ್ಲುವುದಕ್ಕಿಂತ ಅಡುಗೆಮನೆಯೆಂಬ ಲ್ಯಾಬಿನಲ್ಲಿ ಹೊಸಬಗೆಯ ಮೆಂತ್ಯ ಇಡ್ಲಿ ಮತ್ತು ಹುರಿದ ಬೇಳೆ ಸಾಂಬಾರ್ ಕಾಂಬಿನೇಷನ್ ಟೆಸ್ಟ್ ಮಾಡಿ ಟೇಸ್ಟ್ ಮಾಡಿ ನೋಡಿ.

ಮೆಂತ್ಯ ಇಡ್ಲಿ

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಕುಸುಬುಲ ಅಕ್ಕಿ - 4 ಲೋಟ
ಮೆಂತ್ಯದ ಕಾಳು - 3 1/2 ಚಮಚ
ಕಲ್ಲುಪ್ಪು - 4 ಚಮಚ

ತಯಾರಿಸುವ ವಿಧಾನ

1. ಮೆಂತ್ಯದ ಕಾಳುಗಳನ್ನು ಒಟ್ಟಿಗೆ 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ.
2. ಅಕ್ಕಿಯನ್ನು ಪ್ರತ್ಯೇಕವಾಗಿ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿರಿ.
3. 1/2 ಗಂಟೆಗಳ ಕಾಲ ಮೆಂತ್ಯವನ್ನು ನುಣ್ಣಗೆ, ನೊರೆ ನೊರೆಯಾಗುವಂತೆ ರುಬ್ಬಿಕೊಳ್ಳಿ.
4. ಅಕ್ಕಿಯನ್ನು ಸಣ್ಣ ರವೆಯಷ್ಟಾಗುವವರೆಗೆ ಹದವಾಗಿ ರುಬ್ಬಿರಿ. ರುಬ್ಬಿದ ಮೆಂತ್ಯ ಮತ್ತು ಅಕ್ಕಿಯನ್ನು ಒಟ್ಟಿಗೆ ಉಪ್ಪಿನೊಂದಿಗೆ ಬೆರೆಸಿರಿ.
5. ಚಿಟಿಕೆಯಷ್ಟು ತಿನ್ನುವ ಸೋಡಾ ಬೆರೆಸಿ 10 ಗಂಟೆಗಳ ಕಾಲ ಅದನ್ನು ಮುಚ್ಚಿಟ್ಟುಬಿಡಿ.
6. ಸಾಧಾರಣವಾದ ರೀತಿಯಲ್ಲಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿರಿ.

ಸೂಚನೆ : ಯಾವಾಗಲೂ ಉಪ್ಪನ್ನು ಕೊನೆಯಲ್ಲಿ ಸೇರಿಸಬೇಕು ರುಬ್ಬುವ ಮೊದಲು ಉಪ್ಪನ್ನು ಬೆರೆಸಿದರೆ ಇಡ್ಲಿಗಳು ಗಟ್ಟಿಯಾಗುತ್ತದೆ.

ಹುರಿದ ಬೇಳೆ ಸಾಂಬಾರ್

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಈರುಳ್ಳಿ - 2
ಟೊಮೇಟೊ - 3
ಆರಿಷಿಣ ಪುಡಿ - 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಬೇಕಾದರೆ ಸಕ್ಕರೆ ಅಥವಾ ಬೆಲ್ಲ
ದನಿಯಾ - 1 ಚಮಚ
ಕೆಂಪು ಮೆಣಸಿನಕಾಯಿ - 8
ಹುರಿದ ಕಡಲೆ ಬೇಳೆ - 1 1/2 ಚಮಚ

ತಯಾರಿಸುವ ವಿಧಾನ

ಮೊದಲು ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿರಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವು, ಅರಿಷಿಣ ಸೇರಿಸಿ ಚೆನ್ನಾಗಿ ತಾಳಿಸಿರಿ. ಅದಕ್ಕೆ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ.

ನಂತರ ದನಿಯಾ, ಕೆಂಪು ಮೆಣಸಿನಕಾಯಿ ಮಿಶ್ರಣ ಮತ್ತು ಕಡಲೆಬೇಳೆಯನ್ನು ಪ್ರತ್ಯೇಕವಾಗಿ ಹುರಿದು ಪುಡಿಮಾಡಿಟ್ಟುಕೊಳ್ಳಿ. ಪುಡಿ ಮಾಡಿದ ದನಿಯಾ ಮತ್ತು ಕೆಂಪು ಮೆಣಸಿನಕಾಯಿಯನ್ನು ಕುದಿಬಂದ ನೀರಿಗೆ ಸೇರಿಸಿರಿ. ಕೆಲ ನಿಮಿಷಗಳ ಕಾಲ ಕುದಿಸಿ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸುವ ಮುನ್ನ ಪುಡಿ ಮಾಡಿದ ಬೇಳೆಯನ್ನು ನೀರಿನಲ್ಲಿ ಕಲಸಿ, ಇದಕ್ಕೆ ಸೇರಿಸಿರಿ. ಇದಕ್ಕೆ ಖಮ್ಮಗೆ ವಾಸನೆ ಬರಲು ಕೊತ್ತಂಬರಿ ಕತ್ತರಿಸಿ ಹಾಕಿರಿ.

**** ಗೋಪಿಕಾರವೀಂದ್ರ.

No comments:

Post a Comment