Sunday, October 11, 2009

ಶಾಕಾಹಾರಿಗಳಿಗಾಗಿ ಬನಾನಾ ಕಬಾಬ್!



ಚಿಕ್ಕನ್ ಕಬಾಬ್, ಮಟನ್ ಕಬಾಬ್ ಎಂದು ಬಾಯಿ ಚಪ್ಪರಿಸಿ ಮಾಂಸಹಾರಿಗಳು ತಿನ್ನುವಾಗ, ನೀವೇಕೆ ಬನಾನಾ ಕಬಾಬ್ ಸವಿಯಬಾರದು? ಯಾವುದೇ ಸಂದರ್ಭವಿರಲಿ, ಇಲ್ಲದಿರಲಿ ಬಿಸಿಬಿಸಿ ಬನಾನಾ ಕಬಾಬ್ ನಿಮ್ಮ ಹೊಟ್ಟೆಗಿಳಿಯಲಿ.

ಅಗತ್ಯವಾದ ಸಾಮಾಗ್ರಿಗಳು:

ದಪ್ಪನೆಯ ನೇಂದ್ರ ಬಾಳೆ ಕಾಯಿ: ಒಂದು ಕಿಲೋ
ಮೈದಾ: 2ಕಪ್
ಅರಿಶಿಣ ಪುಡಿ: ಅರ್ಧ ಚಮಚ
ಏಲಕ್ಕಿ ಪುಡಿ: ಒಂದು ಚಮಚ
ಸಕ್ಕರೆ: 4 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸೋಡಾ: ಚಿಟಿಕೆ
ಜೀರಿಗೆ ಒಂದು ಚಮಚದಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ ಸಹ ಬಹಳ ಸುಲಭ:

ಮೊದಲು ಬಾಳೆ ಕಾಯಿಯ ಸಿಪ್ಪೆಯನ್ನು ತೆಗೆದು ಬಿಡಿ. ಸಿಪ್ಪೆ ತೆಗೆದ ಬಾಳೆಹಣ್ಣನ್ನು ನಿಮ್ಮ ಮನಸ್ಸಿಗೆ ಇಷ್ಟವಾದಂತೆ ಉದ್ದುದ್ದಕ್ಕೆ ಅಥವಾ ಅಡ್ಡಡ್ಡಕ್ಕೆ ಸೀಳಿ. ಅವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿಡಿ.

ಆಮೇಲೆ ಮೈದಾ ಹಿಟ್ಟಿನೊಂದಿಗೆ ಅರಿಷಿಣ ಪುಡಿ, ಏಲಕ್ಕಿ ಪುಡಿ, ಸಕ್ಕರೆ, ಉಪ್ಪು, ಸೋಡಾ, ಜೀರಿಗೆ ಎಲ್ಲ ಸೇರಿಸಿಟ್ಟುಕೊಳ್ಳಿ. ಅದಕ್ಕೆ ನೀರು ಸೇರಿಸಿ ಎಲ್ಲೂ ಗಂಟಾಗದಿರುವ ಹಾಗೆ ಚೆನ್ನಾಗಿ ಕಲಸಿ. ಅದು ದೋಸೆ ಹಿಟ್ಟಿನಷ್ಟು ಅಳಕಾಗಿರಬೇಕು.

ಅಲ್ಲಿಗೆ ಶೇ.70ರಷ್ಟು ಕೆಲಸ ಮುಗಿದು ಹೋಯಿತು. ಬಾಣಲಿಯಲ್ಲಿನ ಎಣ್ಣೆ ಕಾದ ನಂತರ, ಬಾಳೇ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಬೋಂಡಾ ಕರಿದಂತೆ ಕೆಂಪಗಾಗುವ ತನಕ ಕರಿಯಿರಿ. ಆಮೇಲೆ ತಟ್ಟೆಗೆ ಬಿಸಿಬಿಸಿ ಬನಾನಾ ಕಬಾಬ್ ಬಾಕಿಕೊಂಡು ರುಚಿ ನೋಡಿ! ಜೊತೆಗೊಂದು ಕಪ್ ಬಿಸಿಬಿಸಿ ಕಾಫಿಯಿದ್ದರಂತೂ ಮಜವೋ ಮಜ.

ಇದನ್ನು ಹೆಂಗಳೆಯರ ಕಿಟ್ಟಿ ಪಾರ್ಟಿಗಳಲ್ಲಿ, ಸ್ನೇಹಿತರು ಬಂಧುಗಳು ಸೇರಿಕೊಂಡಾಗ, ಬನಾನಾ ಕಬಾಬ್ ತಿನ್ನಲೇಬೇಕೆನ್ನಿಸಿದಾಗ ಮತ್ತು ಹಾಗೆ ಸುಮ್ಮನೆ ಯಾವಾಗಲಾದರೊಮ್ಮೆ ಪ್ರಯೋಗಿಸಿ ನೋಡಿ.

1 comment: