Sunday, October 11, 2009

ಬಾಸುಮತಿ ಮತ್ತು ಬದನೇಕಾಯಿ ಪಲಾವ್



ಬೇಕಾಗುವ ಸಾಮಗ್ರಿಗಳು:

ಬಾಸುಮತಿ ಅಕ್ಕಿ 1/4 ಕೆಜಿ, ಏಲಕ್ಕಿ 2, ಲವಂಗ : 2, ದಾಲ್ಚಿನಿ 3, ಇಂಚಿನತುಂಡು 1/2, ದೊಡ್ಡಗಾತ್ರದ ಈರುಳ್ಳಿ 2, ತುಪ್ಪ 3 ಚಮಚ, ಎಳೇಬದನೇಕಾಯಿ 1/4 ಕೆಜಿ, ಸಾಸಿವೆ 1/2 ಚಮಚ, ಅರಶಿನಪುಡಿ 1/4 ಚಮಚ, ಇದಕ್ಕೆ ಸರಿಹೊಂದುವಂತೆ ಉಪ್ಪು , ಕರಿಬೇವಿನಸೊಪ್ಪು ಸ್ವಲ್ಪ, ಗೋಡಂಬಿ 10.

ರುಬ್ಬಿಕೊಳ್ಳಬೇಕಾದ ಪದಾರ್ಥಗಳು:

ತಾಜಾ ತೆಂಗಿನಕಾಯಿತುರಿ 1 ಚಮಚ, ಕಪ್ಪುಮೆಣಸು 1/4 ಚಮಚ, ಕೊತ್ತಂಬರಿಬೀಜ 1 1/2 ಚಮಚ, ಕಡಲೆ ಬೇಳೆ 1 ಚಮಚ, ಉದ್ದಿನಬೇಳೆ 1/2 ಚಮಚ, ಕೆಂಪು ಮೆಣಸಿನಕಾಯಿ 4, ಇಂಗು 1 ಚುಟುಕೆ. (ಮೇಲೆ ಪಟ್ಟಿ ಮಾಡಿರುವ ಎಲ್ಲಾ ಪದಾರ್ಥಗಳನ್ನು 1/2 ಚಮಚ ಎಣ್ಣೆಯಲ್ಲಿ ಹುರಿಯಿರಿ ಮತ್ತು ತೆಂಗಿನಕಾಯಿಯೊಂದಿಗೆ ರುಬ್ಬಿಟ್ಟುಕೊಳ್ಳಿ)

ತಯಾರಿಸುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು 10 ನಿಮಿಷ ನೀರಿನಲ್ಲಿ ನೆನೆಸಿರಿ. ನೆನೆದ ಅಕ್ಕಿಯಿಂದ ಅನ್ನ ಮಾಡಿದರೆ ಗ್ಯಾಸ್ ಉಳಿಯತ್ತೆ. ಭಾರವಾದ ಪಾತ್ರೆಯೊಂದನ್ನು ಒಲೆ ಮೇಲೆ ಮೇಲಿಟ್ಟು, 2 ಚಮಚ ತುಪ್ಪ ಬಿಸಿ ಮಾಡಿರಿ. ಇದರಲ್ಲಿ ದಾಲ್ಚಿನಿ, ಲವಂಗ, ಏಲಕ್ಕಿ ಮತ್ತು ಸೀಳಿಕೊಂಡ ಈರುಳ್ಳಿಯನ್ನು ಹುರಿಯಿರಿ. ಇದು ಕೆಂಪಾದ ನಂತರ, ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.

ಇದಕ್ಕೆ ಎರಡು ಲೋಟ ಬಿಸಿನೀರು ಮತ್ತು ಉಪ್ಪು ಸೇರಿಸಿರಿ. ಚೆನ್ನಾಗಿ ಕೆದಕಿ ಮುಚ್ಚಳ ಹಾಕಿ ಸಣ್ಣ ಉರಿಯಲ್ಲಿ 15 ರಿಂದ 20 ನಿಮಿಷ ಅನ್ನ ಬೇಯಿಸಿರಿ ನಂತರ ಒಲೆಯಿಂದ ಕೆಳಗಿಳಿಸಿರಿ. ಬದನೇಕಾಯಿಯನ್ನು ಉದ್ದುದ್ದವಾಗಿ ಸೀಳಿಕೊಂಡು, ಉಪ್ಪು ಬೆರೆಸಿದ ನೀರಿನಲ್ಲಿ ನೆನೆಸಿರಿ. ಮಿಕ್ಕಿರುವ ತುಪ್ಪವನ್ನು ಬಿಸಿಮಾಡಿ, ಅದರಲ್ಲಿ ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಬದನೇಕಾಯಿಯನ್ನು ಹುರಿಯಿರಿ. ಅದು ಬೆಂದ ನಂತರ ಅದಕ್ಕೆ ರುಬ್ಬಿಕೊಂಡ ಮಸಾಲೆ ಸೇರಿಸಿ ಒಳ್ಳೆ ಪರಿಮಳ ಬರುವವರೆಗೆ ಹುರಿಯಿರಿ. ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿರಿ. ಅನ್ನ ಮಾಡಿಟ್ಟುಕೊಂಡ ಪಾತ್ರೆಯನ್ನು ಮತ್ತೆ ಒಲೆಯ ಮೇಲಿರಿಸಿ ಬದನೆಕಾಯಿಯನ್ನು ಸೇರಿಸಿ. ಒಂದು ಚಮಚ ತುಪ್ಪದೊಂದಿಗೆ ಮೃದುವಾಗಿ ಬೆರೆಸಿರಿ. ಒಂದೆರಡು ನಿಮಿಷ ಕೈಯಾಡಿಸಿ ಪಾತ್ರೆಯನ್ನು ಕೆಳಗಿಳಿಸಿ ಬಿಸಿಬಿಸಿಯಾಗಿ ಬಡಿಸಿರಿ.

No comments:

Post a Comment