Friday, May 1, 2009

ಸತ್ಯನಾರಾಯಣನ ಪೂಜೆ, ಮಮ ಪ್ರಸಾದ ವಿನಿಯೋಗಃ



ಪೂಜೆಯೆಂದರೆ ಸತ್ಯನಾರಾಯಣ ಪೂಜೆಯಯ್ಯಾ, ರುಚಿಯೆಂದರೆ ಸಪಾದ ಭಕ್ಷ್ಯದ್ದಯ್ಯಾ...

ಸತ್ಯ ನಾರಾಯಣ ಪೂಜೆಯಲ್ಲಿ ಮಹಾ ಪೂಜೆಯಾದ ನಂತರ ಕಡ್ಡಾಯವಾಗಿ ತಿನ್ನಬೇಕು ಅಂತ ಪ್ರಸಾದ ರೂಪದಲ್ಲಿ ಒಂದಿಷ್ಟು ಸ್ವೀಟ್‌ ಕೊಡುತ್ತಾರಲ್ಲ. ಎಂಥ ರುಚಿ ಅಂತೀರಿ. ಬಣ್ಣವಿಲ್ಲದ ಕೇಸರೀಬಾತ್‌ನ ಹಾಗೆ ಕಾಣುವ ಈ ಸ್ವೀಟ್‌ ಯಾಕಿಷ್ಟು ರುಚಿ ಅಂತ ಕೇಳಿದರೆ, ‘ಅದು ದೇವರಿಗೆ ನೈವೇದ್ಯ ಮಾಡಿದ್ದು . ಅದಕ್ಕೇ ಅಷ್ಟೊಂದು ರುಚಿ...’ ಅಂತ ಅಮ್ಮ ಸಮಜಾಯಿಷಿ ಹೇಳುತ್ತಾಳೆ. ಒಂಚೂರೇ ಕೊಡುತ್ತಾರಲ್ಲ ಅದಕ್ಕೇ ಅಷ್ಟು ರುಚಿ ಕಣೋ... ಅಂತ ಸ್ನೇಹಿತ ಲಾಜಿಕಲ್‌ ಉತ್ತರ ಹೇಳಿದರೂ. .

ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಮಾಡುವ ಸಿಹಿ ತಿಂಡಿಯ ಹೆಸರು ಸಪಾದ ಭಕ್ಷ್ಯ. ಮನೆಯಲ್ಲಿ ಸಣ್ಣ ಸಮಾರಂಭವೆಂದರೂ ಸತ್ಯನಾರಾಯಣ ಪೂಜೆ ಇಟ್ಟುಕೊಳ್ಳುವುದು ರೂಢಿ. ಸೋ, ಈ ಸಪಾದ ತಯಾರಿಸುವುದು ಹೇಗೆಂದು ತಿಳಿಯೋಣ.

ಬೇಕಾದ ಸಾಮಾನು :

ಎರಡು ಲೋಟ ಸಕ್ಕರೆ
ಎರಡು ಲೋಟ ಮೈದಾಹಿಟ್ಟು, ಅಥವಾ ಸೋಜಿ.
ಎರಡು ಲೋಟ ನೊರೆಹಾಲು
ಮೂರು ನಾಲ್ಕು ಬಾಳೆ ಹಣ್ಣುಗಳು
ಎರಡು ಲೋಟ ತುಪ್ಪ
ಬಾಳೆಹಣ್ಣಿನ ಹೊರತಾಗಿ ಎಲ್ಲ ವಸ್ತುಗಳೂ ಸಮಪ್ರಮಾಣದಲ್ಲಿರಬೇಕು.
ಸಾಮಾನ್ಯವಾಗಿ ಸತ್ಯನಾರಾಯಣ ಪೂಜೆಗೆ ನೈವೇದ್ಯ ರೂಪದಲ್ಲಿ ಸಪಾದ ಭಕ್ಷ್ಯ ತಯಾರಿಸುವುದಿದ್ದರೆ, ಪ್ರತಿಯಾಂದು ವಸ್ತುವಿನ ಪ್ರಮಾಣ ಒಂದೂಕಾಲು ಸೇರಾಗಿರಬೇಕು ಎಂಬುದು ಪ್ರತೀತಿ. ಮತ್ತೆ ಪುರೋಹಿತರು ಹೇಳಿದ ಅಳತೆಯೇ ಅಂತಿಮ.

ವಿಧಾನ:

ಬಾಳೆ ಹಣ್ಣನ್ನು ಸುಲಿದು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಕಂಚಿನ ಬಾಣಲೆಯಲ್ಲಿ ತುಪ್ಪವನ್ನು ಸುರಿದು ಒಲೆಯ ಮೇಲಿಟ್ಟು, ಸ್ವಲ್ಪ ಹೊತ್ತು ಕಾಯಿಸಿ. ತುಪ್ಪ ಬಿಸಿಯಾದ ನಂತರ ಹೆಚ್ಚಿಟ್ಟ ಬಾಳೆ ಹಣ್ಣನ್ನು ತುಪ್ಪಕ್ಕೆ ಹಾಕಿ. ಅದು ತುಸುವೇ ಕಂದು ಬಣ್ಣಕ್ಕೆ ತಿರುಗುವ ತನಕ ಮಗುಚುತ್ತಿರಿ. ನಂತರ ಮೈದಾ ಹಿಟ್ಟು ಹಾಕಿ ಅದು ಕೆಂಪಗಾಗುವ ವರೆಗೆ ಸ್ವಲ್ಪ ಹೊತ್ತು ಮಗುಚಿ. ನೀವು ಮೈದಾ ಹಿಟ್ಟಿನ ಬದಲಿಗೆ ಸೋಜಿ( ಸಪೂರ ಸಜ್ಜಿಗೆ) ಬಳಸುತ್ತೀರಾದರೆ, ಸೋಜಿ ಬೆಂದ ಪರಿಮಳ ಬರುವವರೆಗೆ ಮಗುಚಬೇಕು. ನಂತರ ಸಕ್ಕರೆ ಹಾಕಿ ಅದು ಪೂರ್ತಿ ಕರಗುವ ತನಕ ಮಗುಚುತ್ತಿರಬೇಕು.

ನಂತರ ಉರಿ ಸಣ್ಣಗೆ ಮಾಡಿ, ಹಾಲು ಹಾಕಿ ಮತ್ತೆ ಮಗುಚಿ. ಅಗತ್ಯವಿದ್ದರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಗಳನ್ನು ಬೆರೆಸಬಹುದು. ತಕ್ಷಣವೇ ಇಳಿಸಿ. ಒಲೆಯಿಂದ ಇಳಿಸುವಾಗ ಮಿಶ್ರಣ ಸ್ವಲ್ಪ ನೀರಾಗಿದ್ದರೂ, ತಣಿಯುತ್ತಿದ್ದ ಹಾಗೇ ದಪ್ಪಗಾಗುತ್ತದೆ. ಬಾಣಲೆ ಮೇಲೆ ಸ್ಟೌವ್‌ ಮೇಲಿಟ್ಟು, ಕೆಳಗಿಳಿಸುವವರೆಗೆ ಮಾತು, ಫೋನ್‌ ಯಾವುದಕ್ಕೂ ಅಡಿಗೆಮನೆಯಿಂದಾಚೆಗೆ ಹೋಗುವ ಹಾಗಿಲ್ಲ.

**ಗೋಪಿಕಾರವೀಂದ್ರ.

No comments:

Post a Comment