Friday, May 1, 2009

ಮಾವಿನಕಾಯಿಯ ಮಸಾಲೆಭಾತ್




ಮಾವಿನಕಾಯಿ ಮತ್ತು ಮಾವಿನಹಣ್ಣಿನ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಮಾಡಲು ಇದುವೇ ಸಕಾಲ. ಯಾಕೆಂದರೆ ಮಾವಿನಕಾಯಿಗಳು ಎಲ್ಲಾ ಕಾಲದಲ್ಲೂ ಲಭ್ಯವಿರುವುದಿಲ್ಲ. ಸಿಕ್ಕಾಗಲೇ ಬಗೆಬಗೆಯ ತಿನಿಸುಗಳನ್ನು ಮಾಡಿ ರುಚಿ ನೋಡಿ, ಇತರರಿಗೂ ತಿಳಿಸುವವ ಜಾಣ. ಬನ್ನಿ ಮಾವಿನಕಾಯಿ ಮಸಾಲೆಭಾತ್ ಮಾಡೋಣ.

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

* ಸಾದಾ ಅಕ್ಕಿ - ಒಂದು ಲೋಟ
* ಅರ್ಧ ಹಣ್ಣಾದ ಮಾವಿನಕಾಯಿ - 1
* ತುಪ್ಪ ಅಥವಾ ಎಣ್ಣೆ - 2 ಚಮಚ
* ಅರಸಿನಪುಡಿ - 1/4 ಚಮಚ
* ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಚಮಚ
* ಕರಿಬೇವಿನ ಸೊಪ್ಪು - 1 ಚಮಚ
* ಜೀರಿಗೆ ಮತ್ತು ಕೆಂಪುಮೆಣಸಿನಕಾಯಿ - 2 ಚಮಚ
* ತೆಂಗಿನ ಕಾಯಿ - 1 ಹಿಡಿ
* ರುಚಿಗೆ ಬೇಕಾದಷ್ಟು ಉಪ್ಪು

ತಯಾರಿಸುವ ವಿಧಾನ:

ಮೊದಲು ಅನ್ನ ಮಾಡಿಕೊಳ್ಳಿರಿ. ಅದನ್ನು ತಣ್ಣಗಾಗಲು, ಅಗಲವಾದ ತಟ್ಟೆಯಲ್ಲಿ ಹರಡಿ ಸ್ವಲ್ಪ ಕಾಲಬಿಡಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಮಾವಿನಕಾಯಿಯ ಹಸಿರು ಸಿಪ್ಪೆಯನ್ನು ಎರೆದು ಅದನ್ನು ತುರಿದಿಟ್ಟುಕೊಳ್ಳಿ. ಮಸಾಲೆ ಸಾಮಗ್ರಿಯನ್ನು ರುಬ್ಬುವಾಗ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ತುರಿದಿಟ್ಟ ಮಾವಿನಕಾಯಿಯನ್ನು ಸೇರಿಸಿ ಆನಂತರ ಎಣ್ಣೆಯನ್ನು ಪಾತ್ರೆಯೊಂದರಲ್ಲಿ ಬಿಸಿ ಮಾಡಿಕೊಂಡು ಒಗ್ಗರಣೆ ಮಾಡಿರಿ. ಕೊನೆಯಲ್ಲಿ ರುಬ್ಬಿಕೊಂಡ ಮಸಾಲೆ ಸೇರಿಸಿ ಎರಡು ನಿಮಿಷ ಕಾಲ ಹುರಿಯಿರಿ. ಇದನ್ನು ಅನ್ನಕ್ಕೆ ಉಪ್ಪಿನೊಂದಿಗೆ ಬೆರೆಸಿರಿ. ತಯಾರಾದ ಭಾತಿಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿರಿ, ಮಾವಿನಕಾಯಿ ಮಸಾಲೆಭಾತ್ ರೆಡಿ. ತಿಂದು ಮಜಾ ಉಡಾಯಿಸಿ.

ಯಾವುದೇ ತಿನಿಸಿರಲಿ ತಿನ್ನಲೇಬೇಕು ಅನ್ನಿಸಿದಾಗ, ತಿನ್ನದೇ ಮತ್ತೆ ತಿಂದರಾಯಿತು ಎಂದು ಮುಂದೆ ಹಾಕಿದರೆ ಹೊಟ್ಟೆಗೆ ಅನ್ಯಾಯ ಮಾಡಿಕೊಂಡಂತೆ ಅಂತೆ. ಈ ರೆಸಿಪಿ ಓದಿದ ಮೇಲಂತೂ ನಿಮಗೆ ಬಾಯಲ್ಲಿ ನೀರೂರದೆ ಇರದು, ನಾವೂ ಮಾಡಿಕೊಂಡು ತಿಂದಿಂದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅನ್ನಿಸುವುದೂ ಸಹಜ. ದಯವಿಟ್ಟು ನಿಮ್ಮ ಹೊಟ್ಟೆಗೆ ಅನ್ಯಾಯ ಮಾಡಿಕೊಳ್ಳಬೇಡಿ. ಈಗಲೇ ಮಾವಿನಕಾಯಿ ಮಸಾಲಾಭಾತ್ ತಯಾರಿಸಿ ರುಚಿನೋಡಿ, ನಮಗೂ ತಿಳಿಸಿರಿ.

****ಗೋಪಿಕಾರವೀಂದ್ರ

No comments:

Post a Comment