Wednesday, July 1, 2009

ಅವಲಕ್ಕಿ ಪೊಂಗಲ್ ಮತ್ತು ಹುಣಿಸೆ ಗೊಜ್ಜು



ಶ್ರಾವಣ ಮಾಸದಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ತಯಾರಿಸಿದ ಗೊಜ್ಜವಲಕ್ಕಿ, ಶೇಂಗಾ ಪುಟಾಣಿ ಉಂಡೆ, ಅರಳಿನ ಉಂಡೆ, ಬೇಸನ್ ಲಾಡು, ಚಕ್ಕುಲಿ ಮುಂತಾದ ಎಲ್ಲ ತಿಂಡಿಗಳಲ್ಲಿ ಹೆಚ್ಚಾಗಿ ಆಕರ್ಷಿಸಿದ್ದು ಅಮ್ಮ ವಿಶೇಷವಾಗಿ ತಯಾರಿಸಿದ ಅವಲಕ್ಕಿ ಪೊಂಗಲ್ ಅಥವಾ ಅವಲಕ್ಕಿ ಹುಗ್ಗಿ.

ನಾನೇ ಮನೆಯಲ್ಲಿ ಮಾಡಿದ್ದ ಗೊಜ್ಜವಲಕ್ಕಿ ಮತ್ತು ಅವರಿವರ ಮನೆಯಿಂದ ಬಂದ ತಿಂಡಿಗಳನ್ನು ತಿಂದು ರುಚಿಗೆಟ್ಟಿದ್ದ ನಾಲಿಗೆಗೆ ಅವಲಕ್ಕಿ ಪೊಂಗಲ್ ಅಪ್ಯಾಯಮಾನವೆನಿಸಿತು. ಜೊತೆಗಿದ್ದ ಹುಳಿಹುಳಿ ಹುಣಿಸೆ ಗೊಜ್ಜು ಹುಗ್ಗಿಯ ರುಚಿಯನ್ನು ದುಪ್ಪಟ್ಟು ಮಾಡಿತು. ಇದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡು ನಿಮಗೆ ತಿಳಿಸಿದ್ದೇನೆ. ಇದು ಹೊಸರುಚಿ ಹೌದೋ ಅಲ್ಲವೋ ಗೊತ್ತಿಲ್ಲ, ರುಚಿಯಂತೂ ಸಖತ್ತಾಗಿದೆ. ನೀವೂ ಮಾಡಿ ನೋಡಿ.

ಈ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಿ

ಗಟ್ಟಿ ಅವಲಕ್ಕಿ 1 ಕಪ್
ಹೆಸರುಬೇಳೆ 1/2 ಕಪ್
ಹೆರೆದ ಒಣ ಕೊಬ್ಬರಿ 3 ಟಿಸ್ಪೂನ್
ಜೀರಿಗೆ
ಮೆಣಸಿನ ಕಾಳು ಅಥವಾ ಮೆಣಸಿನ ಪುಡಿ
ಉಪ್ಪು
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು

ತಯಾರಿಸುವ ವಿಧಾನ

ಗಟ್ಟಿ ಅಥವಾ ದಪ್ಪ ಅವಲಕ್ಕಿಯನ್ನು ಐದು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಕುಕ್ಕರಿನಲ್ಲಿ ಹೆಸರುಬೇಳೆಯನ್ನು ಬೇಯಿಸಿಕೊಂಡ ನಂತರ ನೆನೆಸಿಟ್ಟ ಅವಲಕ್ಕಿಯನ್ನು ಅದಕ್ಕೆ ಸೇರಿಸಿ ಮತ್ತೆ ಒಲೆಯ ಮೇಲೆ ಕುದಿಯಲು ಇಡಬೇಕು.

ಅದನ್ನು ಕುದಿಯಲು ಬಿಟ್ಟು ಸ್ಟೌವಿನ ಇನ್ನೊಂದು ಒಲೆಯ ಮೇಲೆ ಒಗ್ಗರಣೆಯನ್ನು ತಯಾರಿಸಿಟ್ಟುಕೊಳ್ಳಿ. ಬೇಳೆ ಮತ್ತು ಅವಲಕ್ಕಿ ಹೊಂದಿಕೊಂಡು ಕುದಿಯಲು ಶುರುವಾದ ನಂತರ ಅದಕ್ಕೆ ಜೀರಿಗೆ ಮತ್ತು ಮೆಣಸಿನ ಕಾಳು ಸೇರಿಸಬೇಕು. ಅದಕ್ಕೆ ಒಣಕೊಬ್ಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನೇ ಸೇರಿಸಿ ಮೇಲೆ ಒಗ್ಗರಣೆ ಸುರಿಯಿರಿ. ಅಷ್ಟೇ ಅವಲಕ್ಕಿ ಪೊಂಗಲ್ ಅಥವಾ ಅವಲಕ್ಕಿ ಹುಗ್ಗಿ ತಯಾರ್.

ಹುಣಿಸೆಗೊಜ್ಜು ಮಾಡುವ ವಿಧಾನ

ಹುಣಿಸೇ ಹಣ್ಣಿನ ರಸಕ್ಕೆ ಸ್ವಲ್ಪ ಪುಟಾಣಿ ಪುಡಿ, ಉಪ್ಪು, ಖಾರದ ಪುಡಿ, ಬೆಲ್ಲ ಮತ್ತು ಖರ್ಜೂರದ ಪುಡಿಯನ್ನು ಹಾಕಿ ಒಲೆಯ ಮೇಲಿಟ್ಟು ಕುದಿಸಬೇಕು. ಮೊದಲೇ ಒಗ್ಗರಣೆಯನ್ನು ತಯಾರಿಸಿಟ್ಟುಕೊಂಡು ನಂತರ ಇವೆಲ್ಲ ಸೇರಿಸಿ ಕುದಿಸಬಹುದು ಅಥವಾ ಕುದಿದ ನಂತರ ಒಗ್ಗರಣೆ ಸೇರಿಸಬಹುದು.

No comments:

Post a Comment